Friday, 20th September 2024

Human Chain: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ, ದಾಖಲೆಯ ಅತೀ ಉದ್ದದ ಮಾನವ ಸರಪಳಿ ರಚನೆ

ಚಿಕ್ಕಬಳ್ಳಾಪುರ : ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಸಾರುವ ಉದ್ದೇಶ ದಿಂದ ಕರ್ನಾಟಕ ಸರ್ಕಾರವು, ಸೆ.15ರ ಅಂತಾರಾಷ್ಟಿಯ ಪ್ರಜಾಪ್ರಭುತ್ವ ದಿನದ ಅಂಗವಾಗಿ, ಅಂದು ರಾಜ್ಯದ ಜನ ಸಾಮಾನ್ಯರೊಂದಿಗೆ ಸೇರಿ ಜಗತ್ತಿನ ಅತಿ ಉದ್ದದ ಮಾನವ ಸರಪಳಿಯು ರಚಿಸುವ ಮಹತ್ವದ ಕಾರ್ಯಕ್ರಮ ರೂಪಿಸಿದೆ.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಮತ್ತು ಅದನ್ನು ಹೆಚ್ಚು ಹೆಚ್ಚು ಉತ್ತೇಜಿಸುವ ರಾಜ್ಯ ಸರ್ಕಾರದ ಬದ್ಧತೆಗೆ ಅನುಸಾರವಾಗಿ ಈ ಮಾನವ ಸರಪಳಿಯನ್ನು ಆಯೋಜಿಸಲಾಗುತ್ತಿದ್ದು, ಈ ಮಾನವ ಸರಪಳಿಯು ರಾಜ್ಯದ ಬೀದರ್‌ನಿಂದ ಚಾಮರಾಜನಗರದವರೆಗೆ ಎಲ್ಲಾ 31 ಜಿಲ್ಲೆಗಳನ್ನು ಒಳಗೊಳ್ಳಲಿದೆ.

ಇದನ್ನೂ ಓದಿ: Chickballapur Muncipality Election: ನಗರಸಭೆ ಚುನಾವಣೆ ಗೆದ್ದು ಬೀಗಿದ ಸುಧಾಕರ್; ಸೋತು ಬಾಗಿದ ಪ್ರದೀಪ್ ಈಶ್ವರ್

ರಾಜ್ಯದಲ್ಲಿ ಈ ಮಾನವ ಸರಪಳಿಯು ಸುಮಾರು 2500 ಕಿಲೋಮೀಟರ್ ಉದ್ದ ಇರಲಿದ್ದು ಜಗತ್ತಿನ ಅತಿ ಉದ್ದದ ಮಾನವ ಸರಪಳಿ ಆಗಲಿದೆ. ಇದರಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರತಿ ಕಿಲೋಮೀಟರ್‌ಗೆ 1000 ಜನರು ಇರಲಿದ್ದಾರೆ. ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಜನರ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸಂದೇಶವನ್ನು ಬಿತ್ತರಿಸುವುದು ಮಾತ್ರವಲ್ಲದೇ, ಸರ್ಕಾರದ ಬಗೆಗಿನ ಜನರ ಭಾವನೆ ಯನ್ನು ಸಂಗ್ರಹಿಸಿ ಬಿತ್ತರಿಸಲಾಗುತ್ತದೆ.

ಈ ಮಾನವ ಸರಪಳಿಯಲ್ಲಿ ಸ್ವಾತಂತ್ರö್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಒತ್ತಿ ಹೇಳುವ ಪ್ರಜಾಪ್ರಭುತ್ವದ ಬ್ಯಾನರ್ ಮತ್ತು ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಜೊತೆಗೆ ಈ ಸಂದರ್ಭದಲ್ಲಿ ಮಾನವ ಸರಪಳಿಯಲ್ಲಿ ಭಾಗವಹಿಸುವವರಿಂದ ರಾಜ್ಯಾದ್ಯಂತ 10 ಲಕ್ಷ ಸಸಿಗಳನ್ನು ನೆಡಲು ಆಯೋಜಿಸಲಾಗಿದೆ. ಆ ಮೂಲಕ ನಮ್ಮ ಪರಿಸರವನ್ನು ರಕ್ಷಿಸುವಂತಹ ಕಾಳಜಿಯನ್ನೂ ಮಾಡಲಾಗಿದೆ.

ಮಾನವ ಸರಪಳಿಯ ಮಾರ್ಗ ನಕ್ಷೆಯನ್ನು ಕಿಖ ಕೋಡ್‌ನೊಂದಿಗೆ ಪ್ರಕಟಿಸಲಾಗಿದ್ದು, ಇದರಿಂದ ಯಾರು ಬೇಕಾದರೂ ಈ ಮಾನವ ಸರಪಳಿಯಲ್ಲಿ ಎಲ್ಲಿ ಬೇಕಾದರೂ ಸೇರಬಹುದು. ಸೆಪ್ಟೆಂಬರ್ 15 ರಂದು ಬೆಳಗ್ಗೆ ೮:೩೦ ಯಿಂದ ೯:೩೦ ಗಂಟೆಗೆ ಮಾನವ ಸರಪಳಿ ರಚನೆ ನಡೆಯಲಿದ್ದು, ಮಾನವ ಸರಪಳಿ ಬಿಡುವ ಮುನ್ನ ಸಂವಿಧಾನ ಪೀಠಿಕೆ ವಾಚನ ನಡೆಯಲಿದ್ದು, ಈ ವೇಳೆ ಸಸಿಗಳನ್ನು ನೆಡುವ ಕಾರ್ಯಕ್ರಮ ನಡೆಯಲಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯುವ ಈ ಮಾನವ ಸರಪಳಿ ಕಾರ್ಯಕ್ರಮವು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಜಿಲ್ಲೆಗೆ ಮುಂದುವರೆಯಲಿದ್ದು, ದೇವನಹಳ್ಳಿ ತಾಲೂಕಿನ ಮೊಡಕುಹೊಸಹಳ್ಳಿಯಿಂದ ಶಿಡ್ಲಘಟ್ಟ ತಾಲೂಕಿನ ಚಿಕ್ಕೊಂಡಹಳ್ಳಿಯ ವರೆಗೆ ಒಟ್ಟು ೪೭ ಕಿಮೀ ಉದ್ದದ ಮಾನವ ಸರಪಳಿ ರಚಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಈ ಮಾನವ ಸರಪಳಿಯ ಪ್ರತೀ ಕಿಮೀ ಗೆ ೮೦೦ ರಿಂದ ೯೦೦ ಜನ ಭಾಗವಹಿಸಲಿದ್ದು, ಜಿಲ್ಲೆಯಲ್ಲಿ ಸುಮಾರು ೪೦,೦೦೦ ಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮೊಡಕು ಹೊಸಹಳ್ಳಿ, ಕಣಿವೆ ಬಸವಣ್ಣ, ಸುಲ್ತಾನ್ ಪೇಟೆ, ನಂದಿ, ಬೈರನಾಯಕನಹಳ್ಳಿ, ಕಂದವಾರ, ಕಂದವಾರ ಬಾಗಿಲು, ಬಿ.ಬಿ.ರಸ್ತೆ, ಶಿಡ್ಲಘಟ್ಟ ಕ್ರಾಸ್, ಡಿ.ಸಿ.ಕಚೇರಿ, ಪಟ್ರೇನಹಳ್ಳಿ, ನಾಯನಹಳ್ಳಿ, ಹೊಸಹುಡ್ಯ, ಶಿಡ್ಲಘಟ್ಟ, ಆನೂರು, ಚಿಕ್ಕದಾಸರಹಳ್ಳಿ, ಚೀಮಂಗಲ, ಹೆಚ್. ಕ್ರಾಸ್, ಚಿಕ್ಕೊಂಡಹಳ್ಳಿಗಳಲ್ಲಿ ರಚಿಸಲಾಗುವ ಮಾನವ ಸರಪಳಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಈ ವಿನೂತನ ದಾಖಲೆ ನಿರ್ಮಾಣದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಿಶ್ವಸಂಸ್ಥೆಯು ೨೦೦೭ ರ ಸೆಪ್ಟೆಂಬರ್ ೧೫ ರಂದು ಪ್ರಜಾಪ್ರಭುತ್ವ ದಿನವನ್ನು ಆಚರಿಸುವ ಕುರಿತು ಘೋಷಣೆ ಹೊರಡಿಸಿದ್ದು, ಅಂದು ಜಗತ್ತಿನಾದ್ಯಂತ ವಿಶ್ವ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನವು ವಿಶ್ವ ಮಟ್ಟದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಸರಿಸುವ ವೇದಿಕೆಯಾಗಿದ್ದು, ರಾಜ್ಯದಲ್ಲಿ ಸೆಪ್ಟಂಬರ್ ೧೫ ರಂದು ನಡೆಯುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಸಾರ್ವಜನಿಕರೂ ಭಾಗವಹಿಸಿ, ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರö್ಯ, ಸಮಾನತೆ ಮತ್ತು ಭ್ರಾತೃತ್ವದ ಸಂದೇಶವನ್ನು ಇಡೀ ಜಗತ್ತಿಗೆ ಸಾರಬೇಕಿದೆ