ತುಮಕೂರು: ಉತ್ತಮ ಆರೋಗ್ಯ ಶ್ರೇಷ್ಠ ಬದುಕಿನ ಕೀಲಿ ಕೈ. ಸದೃಢ ಆರೋಗ್ಯವಿದ್ದರೆ ಮನುಷ್ಯ ಶ್ರದ್ಧೆ ಹಾಗೂ ಶಿಸ್ತಿನಿಂದ ಸಾಧನೆ ಮಾಡಿ ಜಗತ್ತೇ ಮಾತನಾಡುವಂತೆ ಮಾಡುತ್ತಾನೆ ಎಂದು ರಾಜ್ಯಸಭಾ ಸದಸ್ಯ ಚಿತ್ರನಟ ಜಗ್ಗೇಶ್ ತಿಳಿಸಿದರು.
ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ನಡೆದ ಸಿದ್ಧಗಂಗಾ ಹೆಲ್ತ್ ರನ್ ೧೦ ಕೆ ಮ್ಯಾರಥಾನ್ಗೆ ಚಾಲನೆ ನೀಡಿ ಮಾತನಾಡಿದ ಯಾವುದೇ ಆರೋಗ್ಯ ಸಮಸ್ಯೆಗಳಿರಲಿ ಅದರ ಜಾಗೃತಿಗಾಗಿ ಜನರ ನಡುವೆಯೇ ಹೋಗಿ ಸಂದೇಶ ಸಾರುವುದು ಆಸ್ಪತ್ರೆಗಳ ಪ್ರಮುಖ ಧ್ಯೇಯ ವಾಗಬೇಕು. ಈ ಮ್ಯಾರಥಾನ್ ಹೃದಯ ಜಾಗೃತಿ ಹಾಗೂ ಕ್ರೀಡಾಸ್ಪೂರ್ತಿಯ ವಿಷಯ ದಲ್ಲಿ ರಾಜ್ಯದ ಗಮನ ಸೆಳೆದಿದೆ ಎಂದರು.
ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಮಾತನಾಡಿ ಮನುಷ್ಯನ ಆರೋಗ್ಯದಲ್ಲಿ ಹೃದಯವೇ ಪ್ರಧಾನ ಪಾತ್ರ ವಹಿಸಿರುವಂತಹದ್ದು, ನೆಮ್ಮದಿಗಾಗಿ ಹೃನ್ಮನಗಳಲ್ಲಿ ಸದಾಶಯ ಚಿಂತನೆ ಮನಸ್ಸಿಗೆ ಒಳ್ಳೆಯದಾದರೆ, ಕ್ರೀಡೆಯನ್ನು ಬದುಕಿನ ಹವ್ಯಾಸವಾಗಿ ರೂಢಿಸಿಕೊಳ್ಳುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇಂತಹ ಮ್ಯಾರಥಾನ್ ಗಳಲ್ಲಿ ಭಾಗವಹಿಸಿ ದೈಹಿಕ ಚಟುವಟಿಕೆಗಳ ಬದ್ಧತೆ ಬೆಳಸಿಕೊಳ್ಳಬೇಕು ಎಂದರು.
ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ ಪಂಜಾಬ್, ಕೇರಳ, ತಮಿಳುನಾಡು ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಿಂದ ಸ್ಪರ್ಧಿಗಳು ಮ್ಯಾರಥಾನ್ಗೆ ಆಗಮಸಿ, ಚಿಟಿ ಚಿಟಿ ಮಳೆಯ ನಡುವೆಯೂ ಕೂಡ ಭಾಗಿಯಾಗಿ ಕ್ರೀಡಾಸ್ಪೂರ್ತಿ ಮೆರೆದಿರುವುದು ನಮಗೆ ಇನ್ನಷ್ಟು ಕಾರ್ಯಕ್ರಮ ಆಯೋಜಿಸಲು ಸ್ಪೂರ್ತಿತಂದಿದೆ ಎಂದರು.
೧೦ಕೆ ಮ್ಯಾರಥಾನ್ ವಿಜೇತರು: ಉಡುಪಿಯ ಅನಿಲ್ ಕುಮಾರ್, ಮೈಸೂರಿನ ಲಕ್ಷ್ಮೀಶ ಹಾಗೂ ಮೊಹಾಲಿಯ ಹರ್ಪೀತ್ ಸಿಂಗ್ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು. ಉಳಿದಂತೆ ೫ಕೆ(ಪುರುಷ ಮತ್ತು ಮಹಿಳೆ,೧೮ ವರ್ಷದೊಳಗಿನ ಹಾಗೂ 50 ವರ್ಷ ಮೇಲ್ಪಟ್ಟ) ಹಾಗೂ ಮಜಾರನ್ ವಿಭಾಗದ ವಿಜೇತರಿಗೆ ಪ್ರಯೋಜಕರಿಂದ ನಗದು, ಪ್ರಶಂಸಾಪತ್ರ ಹಾಗೂ ಮೆಡಲ್ ವಿತರಿಸಲಾಯಿತು.
ಅಂತರಾಷ್ಟ್ರೀಯ ಕ್ರೀಡಾಪಟು ಪ್ರಿಯಾ ಮೋಹನ್ರಿಗೆ ಸನ್ಮಾನಿಸಲಾಯಿತು.
ಹಿರಿಯ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಹೆಚ್.ಎಂ, ಡಾ.ಶರತ್ ಕುಮಾರ್ ಜೆ.ವಿ. ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಶಾಲಿನಿ, ಮೆಡಿಕಲ್ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಸಿದ್ಧಗಂಗಾ ಆಸ್ಪತ್ರೆ ಸಿಇಓ ಡಾ.ಸಂಜೀವಕುಮಾರ್, ಮ್ಯಾರ ಥಾನ್ ಪ್ರಾಯೋಜಕರಾದ ಕೆ.ಎಂ.ಎಫ್ನ ಅಧ್ಯಕ್ಷ ಮಹಲಿಂಗಪ್ಪ, ವ್ಯವಸ್ಥಾಪಕ ನಿರ್ದೇಶಕ ಸುರೇಶ್, ಸಿದ್ಧಿ ಬಯೋನ ಎನ್.ಆರ್.ರುದ್ರಪ್ರಕಾಶ್, ಗೋಲ್ಡ್ ಜಿಮ್ ನ ಪ್ರತಾಪ್, ಇದ್ದರು.