ತುಮಕೂರು: ಕಾಂಗ್ರೆಸ್ ಪಕ್ಷದವರಿಗೆ ಜ್ಞಾನ ಕಡಿಮೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಟೀಕಿಸಿದರು.
ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರಗಳ ಪ್ರಮುಖ ಸಭೆಯಲ್ಲಿ ಮಾತ ನಾಡಿ, ನೀರು, ಜಾತಿ ವಿಚಾರವಾಗಿ ಸೇರಿ ಹಲವು ವಿಷಯಗಳಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತಿತ್ತು ಅದು ಬಿಜೆಪಿಯಿಂದ ಬದಲಾಗಿದೆ. ನರೇಂದ್ರ ಮೋದಿ ಈ ದೇಶದ ರಾಜಕೀಯ ವ್ಯವಸ್ಥೆ, ಚರಿತ್ರೆಯನ್ನು ಬದಲಾಯಿಸಿದ್ದಾರೆ. ಮತದಾರರ ಬಳಿ ನೇರವಾಗಿ ಹೋಗಿ ಅವರಿಗೆ ಬಿಜೆಪಿ ಸಾಧನೆಗಳನ್ನು ತಿಳಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ಎಲ್ಲ ಸಮುದಾಯ ಗಳ ಸಮಾವೇಶಗಳು ಬಿಜೆಪಿ ಧ್ವಜದ ಅಡಿಯಲ್ಲಿ ನಡೆಯಬೇಕು ಎಂದರು.
ದಲಿತ ಸಮುದಾಯಕ್ಕೆ ವಿಶೇಷ ಗಮನ ಕೊಟ್ಟು ಅವರನ್ನು ಬಿಜೆಪಿಯೊಂದಿಗೆ ಜೋಡಿಸ ಬೇಕಾಗಿದೆ. ಶಕ್ತಿ ಕೇಂದ್ರದಲ್ಲಿ ಉಪಾಹಾರ ಸಭೆ ಆಗಬೇಕು. ಆಗ ಜಾತಿವಾದ ಇಲ್ಲದಾಗುತ್ತದೆ. ನಮ್ಮ ಪಕ್ಷ ಒಂದು ವರ್ಗದ, ಒಂದು ಸಮುದಾಯದ ಪಕ್ಷ ಅಲ್ಲ. ಎಲ್ಲರನ್ನೂ ಒಟ್ಟು ಗೂಡಿಸಿಕೊಂಡು ಹೋಗುವ ಪಕ್ಷವಾಗಿದೆ ಎಂದು ಹೇಳಿದರು.
ಕಾಂಗ್ರೆಸ್‌ನವರದ್ದು ಜಾತಿ ರಾಜಕಾರಣ, ಬಿಜೆಪಿಯವರದ್ದು ರಿಪೋರ್ಟ್ಕಾರ್ಡ್ ರಾಜಕಾರಣ. ಕರ್ನಾಟಕದಲ್ಲಿ ರಿಪೋರ್ಟ್ ಕಾಡ್೯ ಆಧಾರದಲ್ಲಿ ಚುನವಣೆ ಸಿದ್ದರಿದ್ದೇವೆ ಎಂದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದಲ್ಲಿ ಕರೋನಾ ಲಸಿಕೆ ಕಂಡುಹಿಡಿಯಲಾಯಿತು. ಇದು ಜನರನ್ನು ರಕ್ಷಿಸಿದೆ. ಕಾಂಗ್ರೆಸ್‌ನವರಿಗೆ ತಿಳಿವಳಿಕೆ ಕಡಿಮೆ ಇದೆ. ಪೊಲಿಯೋ ಲಸಿಕೆ ಸೇರಿ ಬೇರೆ ಬೇರೆ ಲಸಿಕೆಯನ್ನು ಕಂಡು ಹಿಡಿಯಲು ಎಷ್ಟು ವರ್ಷ ಬೇಕಾಯಿತು ಎಂದು ಅವರಿಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಭಾರತದಲ್ಲಿ ೯ ತಿಂಗಳು ಮುಂದೆಯೇ ಎರಡನೇ ವಾಕ್ಸಿನ್ ನೀಡಲಾಗಿದೆ. ಈ ವಿಚಾರವನ್ನು ಕರ್ನಾಟಕದ ಜನರಿಗೆ ತಿಳಿಸಬೇಕಿದೆ. ಉಕ್ರೇನ್ ಯುದ್ದದ ನಡುವೆ ಸಿಲುಕಿದ ಮಕ್ಕಳನ್ನು ಭಾರತಕ್ಕೆ ಕರೆತಂದಿದ್ದು ನಮ್ಮ ಹೆಮ್ಮೆಯ ಪ್ರಧಾನಿ. ಆದಿವಾಸಿ ಮಹಿಳೆ ಯನ್ನು ಈಗ ರಾಷ್ಟ್ರಪತಿಯನ್ನಾಗಿ ಮಾಡಿದ್ದಾರೆ ಇದು ದೇಶದ ಇತಿಹಾಸದಲ್ಲಿಯೇ ಮೊದಲನೆಯದು. ಕಾರ್ಯಕರ್ತರು ಹಳ್ಳಿ, ಹಳ್ಳಿಗೆ ಹೋಗಬೇಕು. ಮಾತೆಯರ ಜತೆ ಉಜ್ವಲ ಯೋಜನೆ, ವಿದ್ಯುತ್ ಪೂರೈಕೆ ಬಗ್ಗೆ ಕೇಳಬೇಕು. ಕೇಂದ್ರ ಸರಕಾರದ ಹಲವು ಯೋಜನೆಗಳು ಮಹಿಳೆಯರಿಗೆ ಶಕ್ತಿ ನೀಡಿವೆ ಎಂದರು.
ಇಂದು ಫಲಾನುಭವಿಗಳಿಗೆ ಹಾಕಿದ ಅಷ್ಟೂ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ. ಗುಂಡಿ ಅದುಮಿದ ೧೫ ಸೆಕೆಂಡ್‌ಗಳಲ್ಲಿ ಹಣ ಖಾತೆಯಲ್ಲಿ ಜಮೆ ಆಗಿರುತ್ತದೆ. ಕಾಂಗ್ರೆಸ್ ಅವಧಿಯಲ್ಲಿ ಮಹಿಳೆಯರು ಸೂರ್ಯೋದಯಕ್ಕಿಂತ ಮೊದಲು, ಸೂರ್ಯಾಸ್ತದ ಬಳಿಕ ತಮ್ಮ ನಿತ್ಯಕರ್ಮಕ್ಕಾಗಿ ಗ್ರಾಮದಿಂದ ಹೊರಗೆ ಹೋಗಬೇಕಾಗಿತ್ತು. ಆದರೆ, ಈಗ ಕಾಲ ಬದಲಾಗಿದೆ. ಎಲ್ಲ ಕಡೆ ಶೌಚಾಲಯವನ್ನು ನಿರ್ಮಿಸಲಾಗಿದೆ. ಈ ಮೂಲಕ ೧೨ ಕೋಟಿ ಮಹಿಳೆಯರ ಮರ್ಯಾದೆಯನ್ನು ಮೋದಿ ರಕ್ಷಣೆ ಮಾಡಿ ದ್ದಾರೆ. ೫೦ ಲಕ್ಷ ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಕೊಟ್ಟಿದ್ದಾರೆ ಎಂದು ಕೇಂದ್ರ ಸರಕಾರದ ಸಾಧನೆಗಳ ಬಗ್ಗೆ ತಿಳಿಸಿದರು.
ಎಡೆಯೂರು ಸಿದ್ಧಲಿಂಗೇಶ್ವರ, ಗೊರವನಹಳ್ಳಿ ದೇವಾಲಯ ಸ್ಮರಿಸಿದ ನಡ್ಡಾ ಶಕ್ತಿ ಕೇಂದ್ರದಲ್ಲಿ ಪ್ರಾಮಾಣಿಕ ಕಾರ್ಯಕರ್ತರು ಹೆಚ್ಚಾಗಿದ್ದಾರೆ. ಮೊಟ್ಟ ಮೊದಲನೆಯಾಗಾಗಿ ಇಷ್ಟು ಜನ ಸೇರಿರುವುದಕ್ಕೆ ಖುಷಿಯಾಗಿದೆ. ತುಮಕೂರಿನಲ್ಲಿ ೧೧ ಕ್ಷೇತ್ರಗಳಲ್ಲೂ ಗೆಲ್ಲುವ ಪ್ರಯತ್ನ ಮಾಡೋಣ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅರುಣ್ ಸಿಂಗ್, ಗೃಹ ಸಚಿವ ಅರಗ ಜ್ಞಾನೇಂದ್ರ, ಸಿ.ಟಿ.ರವಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಶಾಸಕ ಜಿ.ಬಿ. ಜ್ಯೋತಿಗಣೇಶ್, ಮುದ್ದುಹನುಮೇಗೌಡ, ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಮತ್ತಿತರರಿದ್ದರು.
ಸಿದ್ಧಗಂಗಾ ಮಠಕ್ಕೆ ನಡ್ಡಾ ಭೇಟಿ
ತುಮಕೂರು: ಎರಡು ದಿನಗಳ ರಾಜ್ಯ ಪ್ರವಾಸದ ಹಿನ್ನೆಲೆ ಕರ್ನಾಟಕಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಗುರುವಾರ ಮಧ್ಯಾಹ್ನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದರು. ಇದಕ್ಕೂ ಮುನ್ನ ತುಮಕೂರು- ಮಧುಗಿರಿ ಸಂಘಟನಾ ತ್ಮಕ ಜಿಲ್ಲೆಗಳ ಶಕ್ತಿಕೇಂದ್ರಗಳ ಪ್ರಮುಖರ ಮತ್ತು ಪದಾಧಿಕಾರಿಗಳ ಸಭೆಯನ್ನ ಉದ್ಘಾಟಿಸಿದ ನಡ್ಡಾ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬ ಕಾರ್ಯಕರ್ತ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಭೆ ಬಳಿಕ ಸಿದ್ಧಗಂಗಾ ಮಠಕ್ಕೆ ಆಗಮಿಸಿ ಡಾ.ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಚಿತ್ರದುರ್ಗದತ್ತ ನಡ್ಡಾ ಪ್ರಯಾಣ ಬೆಳೆಸಿದರು. ಜ.೬ ರಂದು ಶಿರಾದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಅಂದು ಜೆ.ಪಿ.ನಡ್ಡಾ ಜತೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಭಾಗವಹಿಸಲಿದ್ದಾರೆ.