Tuesday, 26th November 2024

ಸೇತುವೆ, ರಸ್ತೆಗಳ ದುರಸ್ಥಿಗೆ ವರದಿ ಪಡೆದು ಶೀಘ್ರ ನೆರವು: ಜೆ.ಸಿ.ಮಾಧುಸ್ವಾಮಿ

ಮಧುಗಿರಿ : ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೀಡಾಗಿರುವ ಸೇತುವೆ ಹಾಗೂ ರಸ್ತೆಗಳ ದುರಸ್ಥಿಗೆ ಅಧಿಕಾರಿ ಗಳಿಂದ ವರದಿ ಪಡೆದುಕೊಂಡು ಶೀಘ್ರ ನೆರವು ನೀಡಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ತಾಲೂಕಿನ ಕಸಬಾ ಬೆಲ್ಲದಮಡುಗು ಕೆರೆ ಕೋಡಿ ಒಡೆದ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಪಟ್ಟಣದ ಚೊಳೇನಹಳ್ಳಿ ಕೆರೆ ಕೋಡಿ ದುರಸ್ಥಿ ಕಾರ್ಯ ಹಾಗೂ ಕಾಳೇನಹಳ್ಳಿಯ ಬೃಹತ್ ಸೇತುವೆಗೆ ಆದ ಹಾನಿಯನ್ನು ಪರಿಶೀಲಿಸಿ ಇಮ್ಮಡಗೊಂಡನಹಳ್ಳಿಯಲ್ಲಿ ಉಂಟಾದ ನೆರೆ ಹಾನಿಯನ್ನು ವೀಕ್ಷಿಸಿ ಮಾತನಾಡಿ ಸಣ್ಣ ನೀರಾವರಿ ಇಲಾಖೆಯ ಎಲ್ಲ ಕೆರೆಗಳು ತುಂಬಿದ್ದು, ನದಿಗಳಿಂದ ಹೆಚ್ಚುವರಿ ನೀರು ಹರಿದ ಪರಿಣಾಮ ಕೆಲವೆಡೆ ಸೇತುವೆ ಹಾಗೂ ರಸ್ತೆಗಳಿಗೆ ಹಾನಿಯಾಗಿದೆ. ಇದಕ್ಕಾಗಿ ಅಗತ್ಯ ನೆರವನ್ನು ಅಧಿಕಾರಿಗಳ ವರದಿ ಬಂದಾಕ್ಷಣ ಬಿಡುಗಡೆ ಮಾಡಲಾಗುವುದು ಎಂದರು.

ಸಣ್ಣ ನೀರಾವರಿ ಇಲಾಖೆಯ ಕೆರೆಗಳೆಲ್ಲ ತುಂಬಿದ್ದು ಬೆಲ್ಲದಮಡುಗು ಕೆರೆ ಹೊರತು ಪಡಿಸಿ ಉಳಿದವು ಸುಭದ್ರವಾಗಿವೆ. ಬೆಲ್ಲದಮಡುಗು ಕೆರೆ ಕೋಡಿ, ಚೊಳೇನಹಳ್ಳಿ ಕೆರೆ ಕೋಡಿಯ ದುರಸ್ಥಿಕಾರ್ಯವನ್ನು ಶೀಘ್ರವಾಗಿ ಕೈಗೊಂಡು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಚನ್ನಸಾಗರ, ಇಮ್ಮಡಗೊಂಡನಹಳ್ಳಿ ಹಾಗೂ ಕಾಳೇನಹಳ್ಳಿ ಸೇತುವೆಗೆ ಭಾರಿ ಹಾನಿ ಯಾಗಿದ್ದು, ಈ ಭಾಗದ ಜನರ ಸಮಸ್ಯೆಗೆ ಶೀಘ್ರ ಮುಂದಾಗಬೇಕೆAದು ಎಪಿಎಂಸಿ ಮಾಜಿ ಅಧ್ಯಕ್ಷ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಸಚಿವರನ್ನು ಒತ್ತಾಯಿಸಿದರು.

ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಮಳೆಯಿಂದಾಗಿ ಹಲವು ಕಡೆ ಮನೆಗಳು, ಸೇತುವೆ ಹಾಗೂ ರಸ್ತೆಗಳಿಗೆ ಹಾನಿಯಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳನ್ನು ಕರೆಸಿದ್ದು ಇಂದು ಸಚಿವರನ್ನು ಕರೆತಂದು ಎಲ್ಲ ಸಮಸ್ಯೆಗಳನ್ನು ಖುದ್ದು ತೋರಿಸಿದ್ದೇನೆ. ನಾನು ಹೇಳದೆ ಕೆಲಸ ಮಾಡುವವನು. ನನ್ನ ಜನರ ಕಷ್ಟಗಳಿಗೆ ಯಾವ ರೀತಿ ಪರಿಹಾರ ಕೊಡಿಸಬೇಕು ಎನ್ನುವುದು ತಿಳಿದಿದ್ದು, ಅದು ಶೀಘ್ರ ಕಾರ್ಯಗತವಾಗಲಿದೆ. ಪಟ್ಟಣದ ರಸ್ತೆಗಳಿಗೆ ನೂತನ ಸ್ಪರ್ಶ ನೀಡಲು ಮಳೆಯು ಅಡ್ಡಿಯಾಗಿದ್ದು ಮಳೆಗಾಲ ನಿಂತಾಕ್ಷಣ ಸುಂದರ ರಸ್ತೆ ನಿರ್ಮಿಸಲು ಮುಂದಾಗುತ್ತೇವೆ ಎಂದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ಸುರೇಶ್ ಆಚಾರ್, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯಂಜಯ ಸ್ವಾಮಿ, ಸಿಇ ರಾಘವನ್, ಎಸ್‌ಇ ಸಂಜೀವರಾಜು, ಇಇ ರವಿ ಸೂರನ್, ಎಇಇ ರಂಗನಾಥ್, ಎಇಗಳಾದ ಮಂಜುಕಿರಣ್, ಜ್ಞಾನಮೂರ್ತಿ, ರಮೇಶ್ ಕುಮಾರ್, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಇದ್ದರು.