Friday, 22nd November 2024

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶೆ

ಕಾಡುಗೊಲ್ಲರಿಗೆ ಅರಿವು: ಊರಾಚೆ ಗುಡಿಸಲಿನಲ್ಲಿದ್ದ ಬಾಣಂತಿ ಮನೆಗೆ 

ತುಮಕೂರು: ಮೌಢ್ಯತೆಯ ನೆಪವೊಡ್ಡಿ ಊರಾಚೆಯಿದ್ದ ಬಾಣಂತಿಯನ್ನು ಮನೆಗೆ ಸೇರಿಸಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ರುವ ಘಟನೆ ತಾಲೂಕಿನ ಬೆಳ್ಳಾವಿ ಹೋಬಳಿ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಪತ್ರಿಕೆಯಲ್ಲಿ ಕಾಡುಗೊಲ್ಲರ ಮೌಢ್ಯಕ್ಕೆ ಬಲಿಯಾದ ಹಸುಗೂಸು ಶೀರ್ಷಿಕೆ ಯಡಿ ಪ್ರಕಟಗೊಂಡಿದ್ದ ವರದಿಯ ಪರಿಣಾಮವಾಗಿ ಗುರುವಾರ ನ್ಯಾಯಾಧೀಶ ರಾದ ನೂರುನ್ನೀಸಾ ಸೇರಿದಂತೆ ತಹಸೀಲ್ದಾರ್, ಬಿಸಿಎಂ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಬಾಣಂತಿ ವಸಂತ ಇದ್ದ ಗುಡಿಸಲನ್ನು ತೆರವುಗೊಳಿಸಿ ಕಾಡುಗೊಲ್ಲರಿಗೆ ಅರಿವು ಮೂಡಿಸಿದರು.
ಒಂದು ತಿಂಗಳ ಹಸುಗೂಸು ಕಳೆದುಕೊಂಡು ಊರಾಚೆ ಗುಡಿಸಲಿನಲ್ಲಿದ್ದ ಬಾಣಂತಿಯ ಆರೋಗ್ಯ ವಿಚಾರಿಸಿ ನ್ಯಾಯಾಧೀಶ ರಾದ ನೂರುನ್ನೀಸಾ ಮಾತನಾಡಿ, ಆರೋಗ್ಯದ ಹೆಚ್ಚಿನ ನಿಗಾ ಅವಶ್ಯಕತೆ ಇರುವ ಬಾಣಂತಿ ಮತ್ತು ಮಗುವನ್ನು, ಊರಾಚೆಯ ಗುಡಿಸಲಿನಲ್ಲಿಯೇ ಇರಿಸಿದ ವಿಚಾರ  ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣವಾಗಿದೆ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಆಚಾರಗಳಿಗಿಂತ ಪ್ರಾಣ ಮುಖ್ಯ ಅನ್ನೋದನ್ನು ಯಾರೂ ಮರೆಯ ಬಾರದು. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ತಪ್ಪಿಸ್ಥತರ ವಿರುದ್ದ ಕಠಿಣ  ಕ್ರಮವಹಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು, ಈ ಬಗ್ಗೆ  ಸಮಗ್ರ ವರದಿಯನ್ನು ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ತಹಸೀಲ್ದಾರ್ ಸಿದ್ದೇಶ್, ಬಿಸಿಎಂ ಜಿಲ್ಲಾ ಅಧಿಕಾರಿ ಗಂಗಪ್ಪ, ಡಿವೈಎಸ್ಪಿ ಶ್ರೀನಿವಾಸ್, ಮುಖಂಡರಾದ ಷಣ್ಮುಖಪ್ಪ, ಗಂಗಾಧರ್, ಆರೋಗ್ಯ ಇಲಾಖೆ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು , ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.
ಮಲ್ಲೇನಹಳ್ಳಿ ಗೊಲ್ಲರಹಟ್ಟಿ ದಂಪತಿಗಳಾದ ಸಿದ್ದೇಶ್ ಮತ್ತು ವಸಂತ ದಂಪತಿಗೆ ಮಗು‌ ಜನಿಸಿತ್ತು. ಕಾಡುಗೊಲ್ಲ ಸಮುದಾಯ ಮೌಢ್ಯತೆಗೆ ಜೋತುಬಿದ್ದು ಬಾಣಂತಿ, ಹಸುಗೂಸನ್ನು ಊರಿಂದಾಚೆ ಗುಡಿಸಲ್ಲಿಡಲಾಗಿತ್ತು. ಶೀತದ ಪರಿಣಾಮ ಮಗು ಮೃತಪಟ್ಟಿತ್ತು.
ಮಗು ಮೃತಪಟ್ಟ ನಂತರವೂ ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯನ್ನು ಲೆಕ್ಕಿಸದೆ ತಾಯಿಯನ್ನು ಹಟ್ಟಿಯ ಒಳಗಡೆ ವಾಸ ಮಾಡಲು ಬೀಡದೆ ಊರಾಚೆಯ ಗುಡಿಸಲಿನಲ್ಲಿಯೇ ಒಂಟಿಯಾಗಿ ಇರಿಸಲಾಗಿತ್ತು. ಈ ಬಗ್ಗೆ ವರದಿ ಪ್ರಕಟಗೊಂಡ ಪರಿಣಾಮ ನ್ಯಾಯಾಧೀಶರಾದ ನೂರುನ್ನೀಸಾ ಅವರು,  ಮಲ್ಲೇನಹಳ್ಳಿ ಗೊಲ್ಲರಹಟ್ಟಿಗೆ ಭೇಟಿ ನೀಡಿ  ಗ್ರಾಮಸ್ಥರಿಗೆ ಕಾನೂನುಗಳ ತಿಳಿವಳಿಕೆ ನೀಡಿ, ಗುಡಿಸಲನ್ನು  ಕೆಡವಿಸಿ, ಬಾಣಂತಿಯನ್ನು ಹಟ್ಟಿಗೆ ಕರೆತರಿಸಿದರು, ಸ್ಥಳೀಯ ವೈದ್ಯರಿಂದ ಚಿಕಿತ್ಸೆ  ಕೊಡಿಸಿ,  ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದರು, ಈ ಹಿಂದೆ  ಸ್ಥಳೀಯ ಸರ್ಕಾರಿ ಅಧಿಕಾರಿಗಳು ಗುಡಿಸಲಿಗೆ ತೆರಳಿ ಬಾಣಂತಿ
ಹಾಗೂ ಮಗುವನ್ನು ಮನೆಗೆ ಸೇರಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿರಲಿಲ್ಲ.
ಕಾಡುಗೊಲ್ಲ ಸಮುದಾಯ ಆಧುನಿಕತೆಗೆ ಹೊಂದಿಕೊಂಡು ಮೌಢ್ಯತೆ ತೊರೆದು ವೈಜ್ಞಾನಿಕ ವಿಚಾರಗಳನ್ನು ಅಳವಡಿಸಿ ಕೊಂಡು ಅಭಿವೃದ್ಧಿಯಾಗಬೇಕೆಂದು ಕಾಡುಗೊಲ್ಲ ಸಮುದಾಯದ ಮುಖಂಡ ನಿವೃತ್ತ ಐಎಫ್ಎಸ್ ಅಧಿಕಾರಿ ಚಿಕ್ಕಪ್ಪಯ್ಯ ಮನವಿ ಮಾಡಿದ್ದಾರೆ.