ಮಧುಗಿರಿ: ಕನ್ನಡಿಗರು ಮಾತೃಭಾಷೆಗೆ ಮೊದಲ ಆದ್ಯತೆ ನೀಡುವಂತೆ ವಿಪ್ರ ಸೇವಾ ಟ್ರಸ್ಟ್ ನಿರ್ದೇಶಕ ಬಿ.ಎಸ್. ರವೀಶ್ ತಿಳಿಸಿದರು.
ಪಟ್ಟಣದ ವಿಪ್ರ ವಿದ್ಯಾರ್ಥಿ ನಿಲಯದಲ್ಲಿ ಶ್ರೀ ಶಾರದಾ ಮಹಿಳಾ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿ ಭಾಷೆಗೂ ಪ್ರಾಚೀನವಾದ ಕನ್ನಡ ಭಾಷೆಗೆ ೨೦೦೦ ವರ್ಷಗಳ ಹಿಂದಿನ ಪರಂಪರೆ ಇದೆ. ನಮ್ಮ ಮಕ್ಕಳು ಕನ್ನಡದಲ್ಲಿ ಮಾತನಾಡಿದರೆ ಅವರನ್ನು ಪ್ರೋತ್ಸಾಹಿಸಬೇಕು.
ಉದ್ಯೋಗ, ವ್ಯವಹಾರಕ್ಕಾಗಿ ವಿದೇಶಗಳಿಗೆ ಹೋದರು, ಅಲ್ಲಿಯೂ ಕನ್ನಡ ಮಾತನಾಡು ವುದನ್ನು ಮರೆಯಬಾರದು ಎಂದರು. ವಿಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ವೇದಬ್ರಹ್ಮ ಶ್ರೀ ನಾಗರಾಜ ಶಾಸ್ತ್ರಿಗಳು ಮಾತನಾಡಿ, ಕನ್ನಡ ಭಾಷೆಯನ್ನು ಕವಿಗಳು ಕಸ್ತೂರಿಗೆ ಹೋಲಿಸಿ ದ್ದಾರೆ. ನಮ್ಮ ಭಾಷೆ ಸುವಾಸನೆಯಿಂದ ಕೂಡಿದ್ದು ಅದರ ಕಂಪು ಎಲ್ಲೆಡೆ ಹರಡು ವಂತಾಗಬೇಕು.
ಶ್ರೀ ಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ. ಆರ್. ಸತ್ಯನಾರಾಯಣ ಮಾತನಾಡಿ, ಹೊರ ರಾಜ್ಯಗಳ ಹೊರಭಾಷಿಕರಿಗೂ ಕನ್ನಡದ ಬಗ್ಗೆ ತಿಳಿ ಹೇಳಬೇಕು, ಅವರು ಕೂಡ ಕನ್ನಡದಲ್ಲಿ ವ್ಯವಹರಿಸುವಂತಾಗಬೇಕು ಎಂದರು.
ಶಾರದಾ ಮಹಿಳಾ ಮಂಡಳಿ ಅಧ್ಯಕ್ಷೆ ಶಕುಂತಲಾ ಗುಂಡೂರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕದ ಏಕೀಕರಣಕ್ಕೆ ಅನೇಕ ಮಹನೀಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಶರಣರು, ದಾಸರು ರಚಿಸಿದ ವಚನ, ದಾಸ ಸಾಹಿತ್ಯವನ್ನು ನಮ್ಮ ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಕೆಲಸವಾಗಬೇಕು ಎಂದರು.
ಸಿರಿನಾಡು ಮಹಾಸಭಾ ರಾಜ್ಯ ಉಪಾಧ್ಯಕ್ಷ ಸುದರ್ಶನಂ ಮಾತನಾಡಿ, ಸಂಘಟನೆಗಳಲ್ಲಿ ಮಹಿಳೆಯರು ಹೆಚ್ಚು ಪಾಲ್ಗೊಳ್ಳಬೇಕು, ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು.
ಶ೦ಕರ ಸೇವಾ ಸಮಿತಿ ಉಪಾಧ್ಯಕ್ಷ ಸೂರ್ಯನಾರಾಯಣ ರಾವ್, ಶಂಕರ ಸೇವಾ ಸಮಿತಿ ಮಾಜಿ ಖಜಾಂಚಿ ಪಿ. ಆರ್. ನಂಜು೦ಡಯ್ಯ ಮಾತನಾಡಿದರು.
ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಡಾ. ರಾಜಲಕ್ಷ್ಮಿ, ಪದಾಧಿಕಾರಿಗಳಾದ ರಮ್ಯಾ, ನಾಗಲಕ್ಷ್ಮಿ, ರಾಜೇಶ್ವರಿ, ಚೈತ್ರ, ನಾಗಶ್ರೀ, ನಾಗಮ್ಮ, ಮಂಜುಳಾ, ಮತ್ತಿತರರು ಉಪಸ್ಥಿತರಿದ್ದರು.