ಮಂಡ್ಯ: ಕನ್ನಡ ಸಾಹಿತ್ಯ ಸಮ್ಮೇಳನದ (Kannada Sahitya Sammelana) ಎರಡನೇ ದಿನವಾದ ಶನಿವಾರ ಸಮಾನಾಂತರ ವೇದಿಕೆ 2ರಲ್ಲಿ ನಡೆದ ಕವಿಗೋಷ್ಠಿ ಮಂಡ್ಯದ ಸಿಹಿ ಸಂಸ್ಕೃತಿ, ಭಾವೈಕ್ಯತೆಯ ಸಂದೇಶ, ನಾಡಿನ ಅನೇಕ ಕಡೆಯ ಚಿತ್ರಣಗಳು, ಸ್ತ್ರೀ ಅಸಮಾನತೆ, ತುಳಿತಕ್ಕೊಳಗಾದವರ ಅಹವಾಲು ಎಲ್ಲವನ್ನೂ ಒಳಗೊಂಡಿತ್ತು. ಬಾಡೂಟವೂ ಪರೋಕ್ಷವಾಗಿ ಬಂತು.
ಹಚ್ಚಿಟ್ಟ ದೀಪಗಳ ಮುಂದೆ ದುವಾ ಮಾಡುವ ಕೈಗಳು ಬೇಕು ಎಂದ ಶರೀಫ್ ಹಸಮಕಲ್, ನಾಡ ಗಡಿ ದಾಟಿ ಬಂದರೂ ಎದೆಗೂಡಿಗೆ ಸೇರಿಕೊಳ್ಳಲಿಲ್ಲ ಎಂದು ʼಪಾರಿವಾಳದ ಪಾಠʼ ತಿಳಿಸಿದರು. ಸಂತೋಷ ಎಸ್ ಕರಹರಿ ಅವರ ಕವನ ಮಂಗಳೂರಿನ ಮೀನಿನಿಂದ ಹಿಡಿದು ರಾಮನಗರ ರೇಷ್ಮೆಯವರೆಗೆ ಎಲ್ಲವನ್ನೂ ಒಳಗೊಂಡು ಜಿಐ ಟ್ಯಾಗ್ ಮ್ಯಾಪ್ನ ಹಾಗಿತ್ತು. ನಾಗೇಶ ನಾಯಕ ಅವರು ತಾನು ಎದುರಿಗೆ ಸಿಕ್ಕಾಗ ನಗದ ಮಂದಿ ತಾನು ಸತ್ತಾಗ ಫೇಸ್ಬುಕ್ನಲ್ಲಿ ಫೋಟೊ ಹಾಕಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಗಿ ಕನ್ನಡಿ ಹಿಡಿದು ಎದುರಿಗೆ ಸಿಕ್ಕಾಗಲೇ ನಾಲ್ಕು ಮಾತಾಡಿಬಿಡಿ ಎಂದು ಸಂದೇಶ ನೀಡಿದರು. ಕಬ್ಬಿನ ರಸವನ್ನು ಹಿಂಡಿ ಸೋಸಿ ಸವಿಬೆಲ್ಲ ರೂಪಿಸಿದಂತೆ ಕವಿತೆ ಇರಬೇಕು ಎಂದು ವನಜಾ ಸುರೇಶ್ ಹೇಳಿದರೆ, ಮೂಲದಲ್ಲಿ ಮನುಷ್ಯ ಒಂದೇ ಆದರೂ ಆತನಿಂದ ಜಾತಿ ಧರ್ಮಗಳನ್ನು ಮೀರಲಾಗುತ್ತಿಲ್ಲ ಎಂದು ರವೀಂದ್ರ ಸಿಂಗ್ ನುಡಿದರು.
ಈ ಸುದ್ದಿಯನ್ನೂ ಓದಿ | Kannada Sahitya sammelana: ಕನ್ನಡಕ್ಕೆ ಡಿಜಿಟಲ್ ಪ್ರಾಧಿಕಾರ ಬೇಕು; ವಿದ್ಯುನ್ಮಾನ ಗೋಷ್ಠಿಯಲ್ಲಿ ಹಕ್ಕೊತ್ತಾಯ
ಬಾಬು ಕೊರಗ ಅವರು ವಿಭಿನ್ನವಾಗಿ ಅಳಿವಿನಂಚಿನಲ್ಲಿನ ಕೊರಗ ಭಾಷೆಯ ಕವಿತೆ ವಾಚಿಸಿದರು. ಸೋಮಲಿಂಗಪ್ಪ ಅವರು ಮನುಷ್ಯ ಮನುಷ್ಯನಾಗಲಿಕ್ಕೆ ಮಠಮಂದಿರ ಮಸೀದಿ ಬೇಕೇ ಬೇಕೆಂದಿಲ್ಲ ಎಂದು ಉದ್ಗರಿಸಿದರು. ರಮ್ಯಾ ಕೆ.ಜಿ ಅವರು ತುಳಿತಕ್ಕೊಳಗಾದ ಸಮುದಾಯದ ನೋವಿನ ಧ್ವನಿಯನ್ನು ತಮ್ಮ ಕವಿತೆಯಲ್ಲಿ ದಾಟಿಸಿ, “ನನ್ನಿಷ್ಟದ ಕೂಳಿಗೂ ಹೊಲಸಿನ ಹೆಸರು ಹಚ್ಚುತ್ತೀರೇಕೆ” ಎಂದು ಪರೋಕ್ಷವಾಗಿ ಬಾಡೂಟದ ವಿವಾದವನ್ನು ಪ್ರಸ್ತಾಪಿಸಿದರು.
ಗಂಗಾಧರ ಪತ್ತಾರ ಅವರು ತಾವು ಬರೆದ 400 ಚೌಪದಿಗಳ ಖಂಡಕಾವ್ಯವನ್ನು ವಾಚಿಸಲು ಆರಂಭಿಸಿದಾಗ ಕೇಳುಗರ ಎದೆ ಧಸಕ್ಕೆಂದಿತು. ಪುಣ್ಯವಶಾತ್ ಅವರು ಅದನ್ನು ಆಯ್ದ ಸಾಲುಗಳಿಗೆ ನಿಲ್ಲಿಸಿದರು. ಸುಬ್ರಾಯ ಬಿದ್ರಮನೆ ಅವರು ಪುರಾಣಕಾಲದಿಂದಲೂ ನಡೆದುಬಂದ ಹೆಣ್ಣಿನ ಶೋಷಣೆಯನ್ನು ಪ್ರತಿಬಿಂಬಿಸಿ, ಅವಳು ಅಬಲೆಯಲ್ಲ ಸಬಲೆ, ಅವಳು ಕತ್ತಲೆಯಲ್ಲಿ ಹಚ್ಚಿಟ್ಟ ದೀಪ ಎಂದರು.
ಕವಿ, ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಬೆಸಗರಹಳ್ಳಿ ಅವರು ಆಶಯ ಭಾಷಣ ಮಾಡಿದರು. ಕವಿ ಎಂದೂ ಅಧಿಕಾರಸ್ಥರ ಮುಂದೆ ಕೈಚಾಚಬಾರದು ಎಂಬುದನ್ನು ಸೂಚ್ಯವಾಗಿ ತಿಳಿಸಿದರು. ನಿರೂಪಕರು ಅವರನ್ನು “ಪೊಲೀಸ್ ಅಧಿಕಾರಿ ಆಗಿದ್ದರೂ ಉತ್ತಮ ಕವಿ” ಎಂದು ಹೇಳಿದ್ದು ಮಾತ್ರ ತಮಾಷೆಯಾಗಿತ್ತು. ಪ್ರದೀಪ್ಕುಮಾರ್ ಹೆಬ್ರಿ ಅವರು ಅಧ್ಯಕ್ಷತೆ ವಹಿಸಿ ಕವನ ವಾಚಿಸಿದರು.
ಈ ಸುದ್ದಿಯನ್ನೂ ಓದಿ | Kannada Sahitya Sammelana: ವಿಶ್ವವಾಣಿ ಮಳಿಗೆಯಲ್ಲಿ ವಿಶ್ವೇಶ್ವರ ಭಟ್ ಸೆಲ್ಫಿ, ಆಟೋಗ್ರಾಫ್ಗೆ ಡಿಮ್ಯಾಂಡ್