Tuesday, 26th November 2024

ಶೀಘ್ರವೇ ರಾಜ್ಯದ ವೀರಶೈವ, ಲಿಂಗಾಯಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ: ಈಶ್ವರ ಖಂಡ್ರೆ 

ತುಮಕೂರು: ವೀರಶೈವ ಮಹಾಸಭಾದಿಂದ ಸುಮಾರು ೧.೨೦ ಕೋಟಿ ರು ಖರ್ಚು ಮಾಡಿ, ರಾಜ್ಯದ ವೀರಶೈವ, ಲಿಂಗಾಯಿತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಘೋಷಿಸಿದರು.
ನಗರದ ಎಸ್.ಐ.ಟಿ.ಯ ಬಿರ್ಲಾ ಸಭಾಂಗಣದಲ್ಲಿ ವೀರಶೈವ, ಲಿಂಗಾಯಿತ ಸೇವಾ ಸಮಿತಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೀರಶೈವ ಮತ್ತು ಲಿಂಗಾಯಿತ ಸಮಾಜದ ಇತಿಹಾಸ ಮತ್ತು ಪರಂಪರೆ ಬಹಳ ದೊಡ್ಡ ದಾಗಿದೆ. ವೀರಕ್ತ ಮತ್ತು ರಾಜಾಶ್ರಯದ ಮಠಗಳು, ಜಾತಿ, ಧರ್ಮದ ಭೇದ ಮಾಡದೆ ಎಲ್ಲ ಮಕ್ಕಳಿಗೂ ಊಟ, ವಸತಿ ಯೊಂದಿಗೆ ಶಿಕ್ಷಣ ನೀಡುವ ಮೂಲಕ ಪ್ರಪಂಚದ ಮೂಲೆ ಮೂಲೆಗಳಲ್ಲಿಯೂ ಭಾರತೀಯರು ದೊರೆಯುವಂತೆ ಮಾಡಿದ್ದಾರೆ ಎಂದರು.
ಯಾರದೋ ಒತ್ತಡಕ್ಕೆ ಮಣಿದು, ನಿಮಗಿಷ್ಟವಿಲ್ಲದ ಕೋರ್ಸುಗಳನ್ನು ತೆಗೆದುಕೊಂಡು ಕಷ್ಟಪಡುವ ಬದಲು, ನಿಮಗೆ ಇಷ್ಟವಾದ ವಿಷಯದ ಬಗ್ಗೆ ಕಠಿಣ ಪರಿಶ್ರಮ ಮತ್ತು ಶ್ರದ್ದೆಯಿಂದ ಮುನ್ನೆಡೆದರೆ ಬೇಕಾದ್ದನು ಸಾಧಿಸಬಹುದು. ೨೧ನೇ ಶತಮಾನ ಭಾರತೀ ಯರ ಯುಗ. ಏಕೆಂದರೆ ದೇಶದಲ್ಲಿ ಅತ್ಯಂತ ಸಶಕ್ತ ಯುವಜನತೆ ಇದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಂತಹ ಕಾರ್ಯಕ್ರಮಗಳು ಆಗಬೇಕಿದೆ ಎಂದರು.
ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ೫೦-೬೦ರ ದಶಕಗಳಲ್ಲಿ ವೀರಶೈವ ಲಿಂಗಾಯಿತ ಮಠಗಳು ನಡೆಸಿದ ಅಕ್ಷರ ಕಾಂತ್ರಿಯ ಫಲವಾಗಿ ಆನೇಕ ಬದಲಾವಣೆಗಳನ್ನು ಕಾಣಲು ಸಾಧ್ಯವಾಗಿದೆ. ಮಕ್ಕಳು ತಮಗೆ ಇಚ್ಚೆ ಇರುವ ಕೋರ್ಸುಗಳ ಜೊತಗೆ, ಜಾಗತಿಕ ಮಟ್ಟದಲ್ಲಿ ಚಾಲ್ತಿಯಲ್ಲಿರುವ ಕೋರ್ಸುಗಳನ್ನು ಓದಿ, ಸ್ವಾವಲಂಬಿ ಜೀವನ ನಡೆಸುವಂತೆ ಸಲಹೆ ನೀಡಿದರು.
 ಎನ್.ಎ.ಎಲ್.ನ ವಿಜ್ಞಾನಿ ಡಾ.ಸಿ.ಎಂ.ಮಂಜುನಾಥ್ ಮಾತನಾಡಿ, ಪ್ರತಿಭಾ ಪುರಸ್ಕಾರವೆಂಬುದು ಇನ್ನೊಬ್ಬರಿಗೆ ಸ್ಪೂರ್ತಿ ನೀಡುವ ಉದ್ದೇಶದಿಂದ ಮಾಡುವ ಗೌರವ. ೧೨ನೇ ಶತಮಾನದಲ್ಲಿ ಬಸವಣ್ಣನವರು ಕಾಯಕವೇ ಕೈಲಾಸ ಎಂಬ ನೀತಿಯನ್ನು ನಮ್ಮ ಮುಂದಿಟ್ಟಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಎಂಬುದು ಆರಂಭವಷ್ಟೇ, ನಿಮ್ಮ ಮುಂದೆ ಸಾಕಷ್ಟು ಅವಕಾಶ ಗಳಿವೆ. ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಪ್ರತಿಭಾವಂತರು ಉದ್ಯೋಗ ಹುಡುಕದೆ, ತಾವೇ ನಾಲ್ವರಿಗೆ ಉದ್ಯೋಗ ನೀಡು ವಂತಹ ಉದ್ದಿಮೆದಾರರಾಗಿ ಬೆಳೆಯಬೇಕೆಂದು ಸಲಹೆ ನೀಡಿದರು.
ವಿಟಿಯು ಸಿಂಡಿಕೇಟ್ ಸದಸ್ಯ ಡಾ.ಡಿ.ಎಸ್.ಸುರೇಶಕುಮಾರ್, ಸ್ವಯಂ ಶಿಸ್ತಿನ ಜತೆಗೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿ ಕೊಳ್ಳಿ, ಪರಿಶ್ರಮ, ಆತ್ಮವಿಶ್ವಾಸ ನಿಮ್ಮನ್ನು ಮೇಲ್ಮುಖವಾಗಿ ತೆಗೆದುಕೊಂಡು ಹೋಗಲಿದೆ ಎಂದು ಕಿವಿ ಮಾತು ಹೇಳಿದರು.
ಶ್ರೀ ಸಿದ್ದಲಿಂಗಸ್ವಾಮೀಜಿ ಮಾತನಾಡಿ, ಯುವಜನರು ಸೇರಿ ವೀರಶೈವ ಲಿಂಗಾಯಿತ ಸೇವಾ ಸಮಿತಿ ರಚಿಸಿಕೊಂಡು, ಪ್ರತಿಭಾ ವಂತರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಸಂತೋಷದ ಕೆಲಸ, ಪ್ರಯತ್ನ, ಪರಿಶ್ರಮ, ವಿಶ್ವಾಸ ಈ ಮೂರು ಅಂಶಗಳು ನಿಮ್ಮನ್ನು ರೂಪಿಸಬಲ್ಲವು. ಶಿಕ್ಷಣದ ಗುರಿ ಸರ್ಟಿಪಿಕೇಟ್ ಅಲ್ಲ, ಚಾರಿತ್ರ ನಿರ್ಮಾಣ ಎಂಬುದನ್ನು ನಾವೆಲ್ಲರೂ ಆರ್ಥ ಮಾಡಿಕೊಳ್ಳಬೇಕೆಂದರು.
ಸಮಾರಂಭದಲ್ಲಿ ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವೆಯ ಶ್ರೀಕಾರದ ವೀರಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಜೆಡಿಎಸ್‌ನ ಪಾಲನೇತ್ರಯ್ಯ, ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್, ಎಸ್.ಡಿ. ದಿಲೀಪ್ ಕುಮಾರ್, ಶಶಿಹುಲಿಕುಂಟೆ, ಪಾಲಿಕೆ ಸದಸ್ಯ ಮಹೇಶ್, ಟಿ.ಆರ್.ಸದಾಶಿವಯ್ಯ, ಕೊಪ್ಪಳ್ ನಾಗರಾಜು, ಹೆಚ್.ಎಂ. ರವೀಶಯ್ಯ, ಬೆಸ್ಕಾಂ ಎಸ್‌.ಇ ನಟರಾಜು, ವೀರಶೈವ, ಲಿಂಗಾಯಿತ ಸೇವಾ ಸಮಿತಿಯ ಅಧ್ಯಕ್ಷ ದರ್ಶನಕುಮಾರ್, ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ರವೀಶ್, ಕಾರ್ಯಾಧ್ಯಕ್ಷ ಎಂ.ಎನ್.ಗುರುಪ್ರಸಾದ್ ಉಪಸ್ಥಿತರಿದ್ದರು.