Friday, 22nd November 2024

ಉನ್ನತ ಶಿಕ್ಷಣಕ್ಕೆ ಮುಕ್ತ ವಿಶ್ವವಿದ್ಯಾಲಯ ಆಸರೆ: ಕೆಎಸ್ಒಯು ಕುಲಪತಿ ಪ್ರೊ.ಶರಣಪ್ಪ

ತುಮಕೂರು: ಉನ್ನತ ಶಿಕ್ಷಣಕ್ಕೆ ಮುಕ್ತ ವಿಶ್ವವಿದ್ಯಾನಿಲಯ ಆಸರೆಯಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ಲಯದ  ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು “ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ” ಎಂಬ ಘೋಷವಾಕ್ಯದೊಂದಿಗೆ 1996ರಲ್ಲಿ ಸ್ಥಾಪನೆ ಯಾಗಿ, 18 ವರ್ಷದಿಂದ 80 ವರ್ಷ ವಯೋಮಾನದವರೆಗಿನ ಲಕ್ಷಾಂತರ ಮಂದಿಗೆ ವಿದ್ಯೆ ನೀಡಿ, ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದು, ವಿಶ್ವವಿದ್ಯಾನಿಲಯವು ಕರ್ನಾಟಕ ದಾದ್ಯಂತ ಪ್ರಸ್ತುತ ಜಿಲ್ಲಾ ಕೇಂದ್ರಗಳಲ್ಲಿ 23 ಪ್ರಾದೇಶಿಕ ಕೇಂದ್ರಗಳನ್ನು ತೆರೆದು ವಿದ್ಯಾರ್ಥಿಗಳಿಗೆ ರೆಗ್ಯೂಲರ್ ವಿಶ್ವವಿದ್ಯಾ ಲಯಗಳ ಉನ್ನತ ಶಿಕ್ಷಣಕ್ಕೆ ಸರಿಸಮನಾಗಿ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ಕೊಡುವಲ್ಲಿ ಮುಂಚೂಣಿ ಯಲ್ಲಿದೆ ಎಂದರು.
ಕ.ರಾ.ಮು.ವಿ.ಯು ಕರ್ನಾಟಕ ರಾಜ್ಯದಲ್ಲಿ ಮೈಸೂರಿನ ಮುಕ್ತಗಂಗೋತ್ರಿಯಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಅತ್ಯಂತ ಸುಂದರವಾದ ಹಸಿರು ಪರಿಸರದಲ್ಲಿ ಸುಸಜ್ಜಿತ ಆಡಳಿತ ಭವನ, ಪರೀಕ್ಷಾ ಭವನ, ವಿಜ್ಞಾನ ಭವನ, ಗ್ರಂಥಾಲಯ, ಪ್ರಾಯೋಗಿಕ ಪ್ರಯೋಗಾಲಯವನ್ನು ಹೊಂದಿದ್ದು, ರಾಜ್ಯದಾದ್ಯಂತ 23 ಪ್ರಾದೇಶಿಕ ಕೇಂದ್ರಗಳು ಮತ್ತು 140 ಕಲಿಕಾರ್ಥಿ ಸಹಾಯ ಕೇಂದ್ರಗಳ ಮೂಲಕ ವಿದ್ಯಾರ್ಥಿ ಸ್ನೇಹಿ ಶಿಕ್ಷಣ ಸೇವೆಯನ್ನು ಒದಗಿಸುತ್ತ ಬಂದಿದೆ ಎಂದು ಅವರು ತಿಳಿಸಿದರು.
ಕ.ರಾ.ಮು.ವಿ.ಯಲ್ಲಿ ಪದವಿ/ಸ್ನಾತಕೋತ್ತರ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು, ರಾಜ್ಯ, ಕೇಂದ್ರ ಸರ್ಕಾರದ ವಿವಿಧ ಶ್ರೇಣಿಯ ಸರ್ಕಾರಿ ಹುದ್ದೆ ಪಡೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆ.ಎ.ಎಸ್. ಐ.ಎ.ಎಸ್. ಪೊಲೀಸ್ ಅಧಿಕಾರಿಗಳಾಗಿ, ಅಧ್ಯಾಪಕರಾಗಿ, ಶಿಕ್ಷಕರಾಗಿ ಕರಾಮುವಿಯ ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಾದೇಶಿಕ ಕೇಂದ್ರ ನಿರ್ದೇಶಕ ಲೋಕೇಶ್ ಗೌಡ ಇದ್ದರು.