Sunday, 15th December 2024

ನಾವು ಬೆಳೆದು ಬಂದ ಹಾದಿಯನ್ನು ಯಾವತ್ತೂ ಮರೆಯಬಾರದು: ಕೆ.ವಿ.ಪ್ರಭಾಕರ್

ಕನ್ನಡ ಪತ್ರಿಕೋದ್ಯಮದ ಅರ್ಧ ಶತಮಾನದ ಚರಿತ್ರೆಗೆ ಕೋಲಾರ ಪತ್ರಿಕೆ ಕನ್ನಡಿಯಾಗಿದೆ

ಕೋಲಾರ: ಕನ್ನಡ ಪತ್ರಿಕೋದ್ಯಮದ ಅರ್ಧ ಶತಮಾನದ ಚರಿತ್ರೆಗೆ ಕೋಲಾರ ಪತ್ರಿಕೆ ಕನ್ನಡಿಯಾಗಿದೆ ಎಂದು ಮುಖ್ಯಮಂತ್ರಿ ಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

50 ವರ್ಷಪೂರೈಸಿದ ಕೋಲಾರ ಪತ್ರಿಕೆಯ ಸುವರ್ಣ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ತಮ್ಮ ಹಾಗೂ ಪತ್ರಿಕೆ ನಡುವಿನ ಭಾವನಾತ್ಮಕ ಸಂಬಂಧವನ್ನು ಹಂಚಿಕೊಂಡರು.

ಒಂದು ಪತ್ರಿಕೆ ಅರ್ಧ ಶತಮಾನ ಪೂರೈಸುವುದು ಎಂದರೆ ಅತ್ಯಂತ ದೊಡ್ಡ ತಪಸ್ಸು. 50 ವರ್ಷಗಳ ಸಮಾಜದ ಪರಿವರ್ತನೆಗೆ ಸಾಕ್ಷಿಯಾಗಿದೆ ಕೋಲಾರ ಪತ್ರಿಕೆ ಎಂದರು.

ಅಚ್ಚುಮೊಳೆಯಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವರೆಗೂ ಪತ್ರಿಕೋದ್ಯಮ ಸಾಗಿ ಬಂದ ಚಿರಿತ್ರೆಗೆ ಕೋಲಾರ ಪತ್ರಿಕೆ ಸಾಕ್ಷಿಯಾಗಿದೆ. ಈ ಅರ್ಧ ಶತಮಾನದಲ್ಲಿ ಕೋಲಾರ ಪತ್ರಿಕೆ ಮೂಲಕ ವೃತ್ತಿ ಬದುಕನ್ನು ಕಟ್ಟಿಕೊಂಡವರು ಹಲವು ಮಂದಿ ಇದ್ದಾರೆ. ಅವರಲ್ಲಿ ನಾನೂ ಒಬ್ಬ.

ಕೋಲಾರ ಪತ್ರಿಕೆಯಿಂದ ಅಕ್ಷರ ಸಂಸ್ಕೃತಿಗೆ ಎಂಟ್ರಿ ಆದವರು, ಈಗ ವಿಧಾನಸೌಧ ತಲುಪಿದ್ದಾರೆ. ರಾಜ್ಯ ಮಟ್ಟದ ಪತ್ರಿಕೆಗಳಿಗೆ ಹೋಗಿದ್ದಾರೆ. ನಾನು ಇವತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನಾಗಿದ್ದೇನೆ ಎಂದರೆ ಈ ಬೆಳವಣಿಗೆಯ ಮೊದಲ ಹೆಜ್ಹೆ ಶುರುವಾಗಿದ್ದು ಕೋಲಾರ ಪತ್ರಿಕೆಯಿಂದ. ನಾನು ಬೆಳೆದು ಬಂದ ಹಾದಿಯನ್ನು ಯಾವತ್ತೂ ಮರೆಯಬಾರದು ಎಂದು ಕೃತಜ್ಞತೆ ಸಲ್ಲಿಸಿದರು.

ಜಿಲ್ಲಾ ಪತ್ರಿಕೆಗಳ ಏಳು ಬೀಳು, ಸಾಧನೆ, ಸಂಘರ್ಷದ ಬಗ್ಗೆ ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಅಧ್ಯಯನ ನಡೆಸಿದರೆ, ಕೋಲಾರ ಪತ್ರಿಕೆ ಅಧ್ಯಯನಕ್ಕೆ , ಪಿ ಹೆಚ್ ಡಿ ಮಾಡುವವರಿಗೆ ಅತ್ಯಂತ ಯೋಗ್ಯವಾದ ವಿಷಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.‌

ಪತ್ರಿಕೆ ಶತಮಾನ ಪೂರೈಸಲಿ, ಪತ್ರಿಕೆಯ ಸಾಧನೆಯನ್ನು ಈ ಸಮಾಜ ಇನ್ನಷ್ಟು ಆತ್ಮೀಯತೆಯಿಂದ ಗುರುತಿಸಲಿ, ತನ್ನದಾಗಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದರು.