ತಾಲೂಕಿನ ಪುರಾಣ ಪ್ರಸಿದ್ದ ಆಲಂಬಗಿರಿ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮಾರ್ಗಶಿರ ಮಾಸದ ಹುಣ್ಣಿಮೆಯಂದು ರಾತ್ರಿ ವಿಷ್ಣು ದೀಪೋತ್ಸವವನ್ನು ಶಾಸ್ತ್ರೋಕ್ತವಾಗಿ ವಿಜೃಂಭಣೆಯಿAದ ಆಚರಿಸಲಾಯಿತು.
ದೀಪೋತ್ಸವದ ಪ್ರಯುಕ್ತ ಭಕ್ತರು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಆವರಣದಲ್ಲಿ ಮಣ್ಣಿನ ಹಣತೆಗಳನ್ನು ಹಚ್ಚಲಾಯಿತು. ದೇವಾಲಯವನ್ನು ದೀಪಗಳಿಂದ ಆಲಂಕರಿಸಲಾಗಿತ್ತು. ದೇವಾಲಯದ ರಾಜಗೋಪುರದ ಮುಂದೆ ಇರುವ ಮೂರು ದೀಪಸ್ತಂಭಗಳಿಗೂ ದೊಡ್ಡ ದೀಪಗಳನ್ನು ಹಚ್ಚಿ ಇಡಲಾಯಿತು. ಎತ್ತರದ ದೀಪಸ್ತಂಭಗಳನ್ನು ಹತ್ತಲು ಅಟ್ಟಣಿಗೆ ಹಾಕಲಾಗಿತ್ತು. ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ|| ಎಂ.ಆರ್.ಜಯರಾಮ್ ಭಾಗವಹಿಸಿದ್ದರು. ಅವರೊಂದಿಗೆ ಗ್ರಾಮದ ಹಲವಾರು ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.
ಗರ್ಭಗುಡಿಯಲ್ಲಿರುವ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿಗೆ ಹಾಗೂ ಲಕ್ಷ್ಮೀ ಅಮ್ಮನವರಿಗೆ ದೇವಾಲಯದಲ್ಲಿ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಅಷ್ಟವಧಾನ ಸೇವೆಯನ್ನು ಸಲ್ಲಿಸಿ ಮಹಾಮಂಗಳಾರತಿಯನ್ನು ಬೆಳಗಲಾಯಿತು. ನಾದಸ್ವರದ ಮಂಗಳ ವಾದ್ಯದೊಂದಿಗೆ ಬೆಳಗಿನ ಪೂಜೆಗಳು ಆರಂಭವಾಯಿತು. ಅಭಿಷೇಕದ ನಂತರ ಸ್ವಾಮಿಯವರಿಗೆ ಹೂಗಳಿಂದ ಮಾಡಿದ ಅಲಂಕಾರ ಭಕ್ತರ ಮನತಣಿಸಿತು. ದೇವಾಲಯವನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು.
ಕೈವಾರದಲ್ಲಿ ಹುಣ್ಣಿಮೆ ಪೂಜೆ ರಥೋತ್ಸವ
ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ಮಠದಲ್ಲಿ ಮಾರ್ಗಶಿರ ಮಾಸದ ಹುಣ್ಣಿಮೆಯ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ಶ್ರೀದೇವಿ, ಭೂದೇವಿ ಸಮೇತ ಶ್ರೀಅಮರ ನಾರೇಯಣಸ್ವಾಮಿ ಹಾಗೂ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ, ಮತ್ತು ಅಷ್ಟಾವಧಾನ ಸೇವೆಯನ್ನು ನೇರವೇರಿಸಿ, ಮಹಾಮಂಗಳಾರತಿಯನ್ನು ಬೆಳಗಲಾಯಿತು. ರಥೋತ್ಸವವನ್ನು ನಡೆಸಲಾಯಿತು. ಭಕ್ತಾಧಿಗಳು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು. ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಪೂಜಾ ಕೈಂಕರ್ಯ ಗಳಲ್ಲಿ ಭಾಗವಹಿಸಿದ್ದರು. ಹುಣ್ಣಿಮೆ ಪ್ರಯುಕ್ತ ನಾದಸುಧಾರಸ ವೇದಿಕೆಯಲ್ಲಿ ಅಖಂಡ ಸಂಕೀರ್ತನೆಯನ್ನು ಏರ್ಪಡಿಸಲಾಗಿತ್ತು.
ಆಲಂಬಗಿರಿಯಲ್ಲಿ ಗಿರಿಪ್ರದಕ್ಷಿಣೆ : ಆಲಂಬಗಿರಿ ದೇವಾಲಯದಿಂದ ಸುಮಾರು ೧ ಕಿ.ಮೀ ದೂರದಲ್ಲಿರುವ ಆಲಂಬಗಿರಿ ಬೆಟ್ಟದ ಪ್ರಕೃತಿಯ ತೊಪ್ಪಲಿನಲ್ಲಿ ಹುಣ್ಣಿಮೆ ಪ್ರಯುಕ್ತ ಸಂಕೀರ್ತನಾ ಗಿರಿಪ್ರದಕ್ಷಿಣೆ ಕಾರ್ಯಕ್ರಮ ನಡೆಯಿತು. ಹುಣ್ಣಿಮೆ ಗಿರಿಪ್ರದಕ್ಷಿಣೆಯಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ|| ಎಂ.ಆರ್.ಜಯರಾಮ್ ರವರು ಭಾಗವಹಿಸಿದ್ದರು. ಅವರೊಂದಿಗೆ ಹಲವಾರು ಭಕ್ತರು ಗಿರಿಪ್ರದಕ್ಷಿಣೆ ಮಾಡಿದರು.