ಮಧುಗಿರಿ : ಎತ್ತಿನಹೊಳೆ ಯೋಜನೆ ಅನುಷ್ಠಾನದಲ್ಲಿ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ವಿಧಾನಪರಿಷತ್ ಸದಸ್ಯರಾದ ರಾಜೇಂದ್ರ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ತಮ್ಮ ಸ್ವಗೃಹದಲ್ಲಿ ಬುಧವಾರ ತಾಲೂಕಿನ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಎತ್ತಿನಹೊಳೆ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಈಭಾಗದ ರೈತರಿಗೆ ಬಹಳಷ್ಟು ತೊಂದರೆ ಯು0ಟಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೆ ಎನ್ ರಾಜಣ್ಣ ಶಾಸಕರಾದರೆ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ವೇಗ ದೊರೆಯಲಿದ್ದು, ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸ ಬಹುದು. ತಾಲೂಕಿನಲ್ಲಿ ರೈಲ್ವೆ ಯೋಜನೆ ಅಡಿಯಲ್ಲಿ ೨೮ ಕಿ.ಮೀ ಭೂ ಸ್ವಾಧೀನ ಪ್ರಕ್ರಿಯೆ ನಡೆಸಬೇಕಾಗಿದ್ದು, ಇದುವರೆಗೂ ಒಂದಿ0ಚು ಭೂಮಿ ಸ್ವಾಧೀನವಾಗಿಲ್ಲ. ರಾಜಣ್ಣನವರು ಶಾಸಕರಾಗಿ ಆಯ್ಕೆಯಾದರೆ ಈ ಯೋಜನೆ ಪೂರ್ಣಗೊಳ್ಳುತ್ತದೆ ಎಂದರು.
ಕೆ.ಎನ್.ಆರ್ ಶಾಸಕರಾಗಿದ್ದ ಸಂದರ್ಭದಲ್ಲಿ ತಾಲೂಕಿನಲ್ಲಿ ೧೬,೦೦೦ ಮನೆಗಳನ್ನು ನಿರ್ಮಿಸಿದ್ದರು. ಇಂದು ಒಂದು ಮನೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂದರು. ತಾಲೂಕಿನ ೩೩ ಗ್ರಾ.ಪಂ ಗಳ ಪೈಕಿ ೨೭ ಗ್ರಾ. ಪಂ ಗಳಲ್ಲಿ ೩೪೦ ಸದಸ್ಯರು ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ ಅವರುಗಳು ತಮ್ಮ ಚುನಾವಣೆ ರೀತಿಯಲ್ಲಿ ವಿಧಾನಸಭಾ ಚುನಾವಣೆ ನಡೆಸಬೇಕು.
ಸೈನಿಕರ ರೀತಿ ಹೋರಾಡಬೇಕು ಎಂದ ಅವರು ವಿಧಾನ ಪರಿಷತ್ ಅಧಿವೇಶನದಲ್ಲಿ ಕೇರಳ ಮಾದರಿಯಲ್ಲಿ ಗ್ರಾ.ಪಂ ಸದಸ್ಯರ ಗೌರವಧನವನ್ನು ಹೆಚ್ಚಿಸುವಂತೆ ಒತ್ತಾಯಿಸಲಾಗಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪುರಸಭೆ ಮತ್ತು ಪಟ್ಟಣ ಪಂಚಾಯತ್ ಸದಸ್ಯರ ಗೌರವಧನ ಹೆಚ್ಚಳಕ್ಕೆ ಪ್ರಯತ್ನಿಸಲಾಗುವುದು ಎಂದರು. ಇದೇ ತಿಂಗಳು ಜನವರಿ ೧೬ ರಂದು ಕಾಂಗ್ರೆಸ್ ಮಹಿಳಾ ಸಮಾವೇಶಕ್ಕೆ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ಆಗಮಿಸಲಿದ್ದು ತಾಲೂಕಿನಿಂದ ಹೆಚ್ಚು ಮಂದಿ ಮಹಿಳೆ ಯರು ಸಮಾವೇಶಕ್ಕೆ ತೆರಳುವಂತೆ ಮನವಿ ಮಾಡಿದರು. ಜನವರಿ ೨೫ ರಂದು ಸುದ್ದೆಕುಂಟೆ ಗ್ರಾಮಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಾಂತಲಾ ರಾಜಣ್ಣ ಮಾತನಾಡಿ ಬಿಜೆಪಿ ಸರ್ಕಾರ ಸೋಲಿನ ಭೀತಿಯಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸುವುದಕ್ಕೆ ಹಿಂದೇಟು ಹಾಕುತ್ತಿದ್ದು, ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಜನಪರ ಆಡಳಿತ ನಡೆಸಲು ಸಾಧ್ಯ ಇಂದಿನ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಸದಸ್ಯರುಗಳು ಒಗ್ಗಟ್ಟಾಗಿ ಕೆಎನ್ ರಾಜಣ್ಣ ರವರನ್ನು ಗೆಲ್ಲಿಸಿಕೊಳ್ಳಬೇಕು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಬೇಡಿ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ ರಾಜಣ್ಣ ಮಾತನಾಡಿ ಕೆ.ಎನ್. ರಾಜಣ್ಣನವರ ಸೋಲಿನ ಬಗ್ಗೆ ಜನತೆಗೆ ಪಶ್ಚಾತಾಪವಾಗಿದ್ದು, ಅನುಕಂಪ ಬಂದಿದೆ ಅದನ್ನು ಬಳಸಿಕೊಳ್ಳಬೇಕು ಡಿಸಿಸಿ ಬ್ಯಾಂಕ್ ವತಿಯಿಂದ ಮಧುಗಿರಿ ತಾಲೂಕಿನಲ್ಲಿ ನೀಡಿದ್ದ ಬಡ್ಡಿ ರಹಿತ ಸಾಲ ೧೭೨ ಕೋಟಿ ರೂ ಸಾಲ ಮನ್ನಾ ವಾಗಿದ್ದು ಮತ್ತೆ ೨೦೦ ಕೋಟಿ ರೂಪಾಯಿ ಸಾಲ ನೀಡಲಾಗಿದೆ.
ಮುಖಂಡರುಗಳು ಕಾರ್ಯ ಕರ್ತರು ಒಗ್ಗಟ್ಟಾಗಿ ಚುನಾವಣೆ ಎದುರಿಸುವಂತೆ ಮನವಿ ಮಾಡಿದರು. ಕೆಪಿಸಿಸಿ ಸದಸ್ಯರಾದ ಎಂ ಎಸ್ ಮಲ್ಲಿಕಾರ್ಜುನಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ ನಾಗೇಶ್ ಬಾಬು, ಪುರಸಭೆ ಮಾಜಿ ಅಧ್ಯಕ್ಷ ಎನ್. ಗಂಗಣ್ಣ, ವಕೀಲರ ಸಂಘದ ಅಧ್ಯಕ್ಷ ಪಿ ಸಿ ಕೃಷ್ಣಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಆದಿನಾರಾಯಣ ರೆಡ್ಡಿ, ಗೋಪಾಲಯ್ಯ, ತಾ. ಪಂ ಮಾಜಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಮುಖಂಡರಾದ ಸಿದ್ದಾಪುರ ವೀರಣ್ಣ, ಪೀಟಿ ಗೋವಿಂದಯ್ಯ, ಶನಿವಾರಂರೆಡ್ಡಿ, ಸಿಂಗನಹಳ್ಳಿ ಕಾಂತರಾಜು ಮತ್ತಿತರರು ಹಾಜರಿದ್ದರು.
Read E-Paper click here