Tuesday, 26th November 2024

ವೃತ್ತಿಯನ್ನು ಪ್ರೀತಿಸಿ ಕಲಿಸುತ್ತ ಕಲಿಯಬೇಕು: ಮಹೇಶ ಮಾಶ್ಯಾಳ

ಬಸವನಬಾಗೇವಾಡಿ:  ಶಿಕ್ಷಕರು ತಮ್ಮನ್ನು ತಾವು ಅರಿತುಕೊಂಡು ತಮ್ಮ ವೃತ್ತಿ ಧರ್ಮ ಪಾಲಿಸಬೇಕು. ವೃತ್ತಿಯನ್ನು ಪ್ರೀತಿಸಿ ಕಲಿಸುತ್ತ ಕಲಿಯಬೇಕು ಎಂದು ಧಾರವಾಡದ ಕನೆಕ್ಟ್ ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನದ ತರಬೇತುದಾರ ಮಹೇಶ ಮಾಶ್ಯಾಳ ಹೇಳಿದರು.

ಪಟ್ಟಣದ ವಿ.ಎಲ್.ಡಿ.ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾ ಲಯದ ಸಭಾಂಗಣದಲ್ಲಿ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ವಿಜಯಪುರದ ಚಾಣಕ್ಯ ಕರಿಯರ ಅಕಾಡಮಿ ಸಹ ಯೋಗದಲ್ಲಿ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ  ಶಿಕ್ಷಕರಿಗೆ ಹಮ್ಮಿ ಕೊಂಡಿದ್ದ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ಅಹಂಕಾರ ಬಿಟ್ಟು ತಮ್ಮ ವೃತ್ತಿಯನ್ನು ಗೌರವಿಸುವ ಗುಣ ಬೆಳೆಸಿ ಕೊಳ್ಳಬೇಕು. ಪ್ರತಿ ಮಗುವಿನಲ್ಲಿ ವಿಭಿನ್ನ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವತ್ತ ಗಮನ ಹರಿಸಿ ಸೂಕ್ತ ಮಾರ್ಗದರ್ಶನ ಮಾಡಬೇಕು. ನಮ್ಮ ಸಂಸ್ಕೃತಿಯನ್ನು ಪೋಷಿಸ ಬೇಕು. ಹಿರಿಯರನ್ನು ಗೌರವಿಸಬೇಕು, ಅಡಂಬರದ ಬದುಕಿನಿಂದ ಹೊರಬರಬೇಕು. ಸರಳತೆಯನ್ನು ರೂಢಿಸಿಕೊಂಡು ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ಶಿಕ್ಷಕ ನಿರಂತರವಾಗಿ ಬದಲಾಗುತ್ತಿರಬೇಕು. ಹೊಸದನ್ನು ಕಲಿಯುತ್ತಿರಬೇಕು. ಸೈನಿಕರು, ವೈದ್ಯರು ಸ್ವಾಮೀಜಿಗಳು, ವಕೀಲರು, ರೈತರು,  ಶಿಕ್ಷಕರಿಗೆ ಸಮಾಜದಲ್ಲಿ ಹೆಚ್ಚಿನ ಗೌರವವಿದೆ. ಆದರೆ ಇವರೆಲ್ಲ ನಿರ್ಮಾಣ ವಾಗುವುದು ಶಿಕ್ಷಕರಿಂದಲೇ. ಸೈನಿಕ ತನ್ನ ವೃತ್ತಿಯಲ್ಲಿ ಎಂದಿಗೂ ಬೇಸರ ಪಟ್ಟುಕೊಳ್ಳುವುದಿಲ್ಲ. ಹೋರಾಟದಲ್ಲಿ ಜೀವನವನ್ನೆ ಮೂಡಿಪಾಗಿಡುತ್ತಾರೆ. ಶಿಕ್ಷಕರಾದವರು ಬೇಸರ ಪಟ್ಟುಕೊಂಡರೆ ವೃತ್ತಿಗೆ ಮೋಸ ಮಾಡಿದಂತೆ. ಅದರಿಂದ ಸಮಾಜ ಬಹುದೊಡ್ಡ ಅಘಾತವನ್ನು ಎದುರಿಸುತ್ತದೆ. ಸೈನಿಕರಷ್ಟೇ ಸಮಯ ಪ್ರಜ್ಞೆ ಶಿಕ್ಷಕರಿಗಿರಬೇಕು. ತರಗತಿಗಳು ಕ್ರೀಯಶೀಲವಾಗಬೇಕು ಎಂದು ಹೇಳಿದರು.

ಕಾಯಕವೇ ಕೈಲಾಸ  ಎಂಬ ಭಾವನೆ ಬೆಳೆಸಿಕೊಂಡು  ಪಾಠ ಮಾಡಬೇಕು. ಮಕ್ಕಳಿಗೆ  ಪ್ರಶ್ನೆಗಳನ್ನು ಹಾಕಿ ಪ್ರಶ್ನೆ ಕೌಶಲವನ್ನು ಹೆಚ್ಚಿಸಬೇಕು.  ವೈಚಾರಿಕ ಕೌಶಲವನ್ನು ಬೆಳೆಸಬೇಕು.  ಹೊಸತನವನ್ನು ಕಲಿಸಬೇಕು. ವಯಕ್ತಿಕ ಜೀವನದಲ್ಲಿ ಪರಸ್ಪರ ಸಂಬಂಧಗಳನ್ನು ಕಾಯ್ದುಕೊಳ್ಳಬೇಕು.  ನಮ್ಮ ಕಾಯಕದಲ್ಲಿ ಸ್ಪರ್ಧೆ ಇರಬೇಕು.  ಸಮಾಜಕ್ಕೆ ಅದು ಅವಶ್ಯಕತೆ ಇದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪಿ.ಬಿ.ಶಿರಾಡೋಣ , ಶಿಕ್ಷಣಾಧಿಕಾರಿ ಮಂಜುನಾಥ ಗುಳೇದಗುಡ್ಡ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಂಗಮೇಶ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕ್ಷೇತ್ರ ಸಮನ್ವಯಾಧಿಕಾರಿ ಪಿ.ಯು.ರಾಠೋಡ ಇದ್ದರು.