Monday, 25th November 2024

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಳಕೆದಾರರ ಶುಲ್ಕ ಹೆಚ್ಚಳ

ಮಂಗಳೂರು: ಅದಾನಿ ಒಡೆತನದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಏಪ್ರಿಲ್ ನಿಂದ ಪ್ರಯಾಣಿಸುವವರು ಹೆಚ್ಚಿನ ಬೆಲೆ ತೆರಬೇಕಾಗಿದೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 2026ರ ವರೆಗೆ ಬಳಕೆದಾರರ ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.

ಪ್ರಸ್ತುತ ನಿರ್ಗಮನ ಪ್ರಯಾಣಿಕರಿಗೆ ಮಾತ್ರ ಶುಲ್ಕ ವಿಧಿಸುತ್ತಿದ್ದು, ಫೆಬ್ರವರಿಯಿಂದ ಆಗಮನ ಪ್ರಯಾಣಿಕರಿಗೂ ಶುಲ್ಕ ವಿಧಿಸಲಾಗುವುದು.

ಸದ್ಯ ದೇಶಿಯ ಪ್ರಯಾಣಿಕರಿಗೆ 150 ರೂಪಾಯಿ, ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 825 ರೂ. ಶುಲ್ಕವಿದ್ದು ಏಪ್ರಿಲ್ ತಿಂಗಳಿನಿಂದ ನಿರ್ಗಮನ ಪ್ರಯಾಣಿಕರು 150 ರೂಪಾಯಿ ಬದಲಿಗೆ 560 ರೂ. ಪಾವತಿಸಬೇಕಿದೆ. 2024ರ ಏಪ್ರಿಲ್ ನಿಂದ 700 ರೂ., 2025ರ ಏಪ್ರಿಲ್ ನಿಂದ 735 ರೂ.ಗೆ ಶುಲ್ಕ ಏರಿಕೆಯಾಗಲಿದೆ.

ಅದೇ ರೀತಿ ಅಂತರರಾಷ್ಟ್ರೀಯ ನಿರ್ಗಮನ ಪ್ರಯಾಣಿಕರು ಪ್ರಸ್ತುತ 825 ರೂ. ಪಾವತಿಸುತ್ತಿದ್ದು, ಇದು ಏಪ್ರಿಲ್ ನಿಂದ 1015 ರೂ.ಗೆ ಹೆಚ್ಚಳವಾಗಲಿದೆ. 2025ರ ಏಪ್ರಿಲ್ ಬಳಿಕ 1920 ರೂ. ಆಗಲಿದೆ.

ಏಪ್ರಿಲ್ ನಿಂದ ಆಗಮನ ದೇಶಿಯ ಪ್ರಯಾಣಿಕರು 150 ರೂ., 2024ರ ಮಾರ್ಚ್ ನಂತರ 240 ರೂ., 2025ರ ಏಪ್ರಿಲ್ ನಂತರ 315 ರೂ. ಶುಲ್ಕ ನೀಡಬೇಕಿದೆ. ಅಂತರಾಷ್ಟ್ರೀಯ ಪ್ರಯಾಣಿಕರು ಫೆಬ್ರವರಿ ಮತ್ತು ಮಾರ್ಚ್ ನಡುವೆ 330 ರೂ., ನಂತರ 2024ರ ಮಾರ್ಚ್ ವರೆಗೆ 435 ರೂ., 2025ರ ಏಪ್ರಿಲ್ ನಂತರ 480 ರೂ. ಶುಲ್ಕ ಪಾವತಿಸಬೇಕಿದೆ.