ಚಿಕ್ಕಬಳ್ಳಾಪುರ : ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿವಂಗತ ಮನಮೋಹನ್‌ಸಿಂಗ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಗೌರವಸಮರ್ಪಣೆ ಸಲ್ಲಿಸಲಾಯಿತು.
ನಗರದ ಬಿ.ಬಿ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶುಕ್ರವಾರ ಬೆಳಿಗ್ಗೆ ೧೧:೩೦ಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್ ದೇಶಕಂಡ ಅಪರೂಪದ ಸರಳ ಸಜ್ಜನಿಕೆಯ ಮಿತಭಾಷಿ ಪ್ರಧಾನಿ ಎಂಬ ಬಿರುದಾವಳಿ ಪಡೆದಿದ್ದ ಮನಮೋಹನ್‌ಸಿಂಗ್ ಅತ್ಯುತ್ತಮ ಪ್ರತಿಭಾನ್ವಿತ ರಾಜಕಾರಣಿ.೨ ಬಾರಿ ಪ್ರಧಾನಿಯಾಗಿದ್ದ ಅವರು ಶಿಸ್ತುಬದ್ಧ ಆರ್ಥಿಕ ತಜ್ಞರಾಗಿದ್ದರಲ್ಲದೆ ಅರ್ಥವ್ಯಸ್ಥೆಯಲ್ಲಿ ಬರುವ ಎಲ್ಲಾ ಪದವಿಗಳನ್ನೂ ಅನುಭವಿಸಿದ್ದ ವಿಶ್ವದ ಏಕೈಕ ವ್ಯಕ್ತಿಯೂ ಹೌದು. ಇಂತಹ ಧೀಮಂತ ನಾಯಕನ್ನು ಕಳೆದುಕೊಂಡ ದೇಶ ಬಡವಾಗಿದೆ. ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದ ಅವರು ಕೊನೆಯವರೆಗೂ ಕೂಡ ಗಾಂಧಿ ಮನೆತನದ ನಿಷ್ಟೆ ಉಳಿಸಿಕೊಂಡಿದ್ದ ಅಪರೂಪದ ನಾಯಕರು.ಇವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಪ್ರೆಸ್ ಸೂರಿ ಮಾತನಾಡಿ ತಮ್ಮ ೧೦ ವರ್ಷದ ಪ್ರಧಾನಿ ಅವಧಿಯಲ್ಲಿ ಎಂದಿಗೂ ಕೂಡ ಮಾಧ್ಯವನ್ನು ದೂರವಿಟ್ಟು ಅಧಿಕಾರ ನಡೆಸಲಿಲ್ಲ. ಒಟ್ಟು ೧೧೬ ಸುದ್ದಿಗೋಷ್ಟಿಯನ್ನು ಎದುರಿಸಿದ್ದಲ್ಲದೆ ವಿದೇಶಿ ಪ್ರವಾಸದಿಂದ ವಾಪಸಾಗುವಾಗಲೂ ವಿಮಾನದಲ್ಲಿಯೇ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ವಾಡಿಕೆಯನ್ನು ಸದಾ ಇಟ್ಟುಕೊಂಡಿದ್ದರು. ಆದರೆ ಈಗಿನ ಪ್ರಧಾನಿ ಮೋದಿ ಒಂದೇ ಒಂದು ಸುದ್ದಿಗೋಷ್ಟಿಯನ್ನು ಕೂಡ ಎದರಿಸುವ ತಾಕತ್ತು ತೋರಿಲ್ಲ.ಮೋದಿ ಮತ್ತು ಅಡ್ವಾನಿ ಇವರನ್ನು ದುರ್ಭಲ ಪ್ರಧಾನಿ ಎಂದು ಜರೆಸಿದ್ದರು. ಇದಕ್ಕೆ ಪ್ರತಿಯಾಗಿ ತಮ್ಮ ಮೌನವನ್ನು ಸಮರ್ಥಿಸಿಕೊಂಡಿದ್ದ ಮನಮೋಹನರು ನನ್ನ ಮೌನ ಸಾವಿರ ಉತ್ತರಗಳಿಗೆ ಸಮ. ದುರುದ್ದೇಶ ಪೂರಿತ ಟೀಕೆಗೆ ಕಿವುಡಾಗವುದು ನನ್ನ ಸಾಮಾನ್ಯ ತಿಳುವಳಿಕೆ ಎಂದು ತಿರುಗೇಟು ನೀಡಿದ್ದರು. ಮುಖ್ಯವಾಗಿ ತಾವು ೨ನೇ ಅವಧಿಗೆ ಪ್ರಧಾನಿ ಆಗಿದ್ದಾಗ ೭೦ ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ ಧೀಮಂತ ನಾಯಕರಾಗಿದ್ದರು ಎಂದು ಕೊಂಡಾಡಿದರು.
ಪಟ್ರೇನಹಳ್ಳಿ ಕೃಷ್ಣ ಮಾತನಾಡಿ ೧೯೯೧ರಲ್ಲಿ ಭಾರತವು ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿದ್ದ ಸಂದರ್ಭದಲ್ಲಿ ವಿತ್ತಸಚಿವ ಆದ ಮನಮೋಹನ್ ಸಿಂಗ್ ಅವರು ದೇಶವನ್ನು ಸಂಕಷ್ಟದಿAದ ಪಾರು ಮಾಡಿದ ಬಹುದೊಡ್ಡ ಆರ್ಥಶಾಸ್ತ್ರಜ್ಞ ರಾಗಿದ್ದರು.ತಮ್ಮ ೧೦ ವರ್ಷದ ಆಡಳಿತದಲ್ಲಿ ದೇಶವು ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದ ಇತಿಹಾಸ ಹೊಂದಿರುವ ಇವರು ಏನೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಮಾಧ್ಯಮವನ್ನು ವಿಶ್ವಾಸಕ್ಕೆ ತೆಗೆದುಕೊಂಡ ಸರಳಜೀವಿಯಾಗಿದ್ದರು ಎಂದರು.
ಸಭೆ ನಡೆಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್,ಪ್ರಧಾನ ಕಾರ್ಯದರ್ಶಿ ಪ್ರೆಸ್ ಸೂರಿ,ಕಿಸಾನ್ ಘಟಕದ ರಾಮಕೃಷ್ಣಪ್ಪ,ಲಾಯರ್ ಮುನೇಗೌಡ, ಸುಧಾ ವೆಂಕಟೇಶ್, ದಿಬ್ಬೂರು ಶ್ರೀನಿವಾಸ್,ಪೆದ್ದಣ್ಣ,ಪಟ್ರೇನಹಳ್ಳಿ ಕೃಷ್ಣ, ಗೋಪಿ, ಕೋಮಡೇನಹಳ್ಳಿ ಚಂದ್ರಪ್ಪ, ಜನಾರ್ಧನ್ ಯಲುವಹಳ್ಳಿ, ಕಣಿತಹಳ್ಳಿ ವೆಂಕಟೇಶ್,ಅಣ್ಣಮ್ಮ,ಲಾಯರ್ ಚಂದ್ರಶೇಖರ್, ನಾರಾಯಣಸ್ವಾಮಿ ಮಾಜಿ ಪ್ರಧಾನಿಗಳ ಸಾಧನೆ ಬದುಕು ಬರಹ ಕೊಡುಗೆಯನ್ನು ಮನದುಂಬಿ ಕೊಂಡಾಡಿದರು.