Friday, 29th November 2024

ಪಂಚರತ್ನ ರಥಯಾತ್ರೆ ಡಿ.೧ರಂದು ತುಮಕೂರು ಜಿಲ್ಲೆಗೆ ಆಗಮನ

ದಿಬ್ಬೂರಿನ ದಲಿತರ ಮನೆಯಲ್ಲಿ ಎಚ್ಡಿಕೆ ವಾಸ್ತವ್ಯ
ಡಿ.1ರಂದು ಕಲ್ಪತರು ನಾಡಿಗೆ ಪಂಚರತ್ನ ರಥಯಾತ್ರೆ
ತುಮಕೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆಯು ಡಿ. ೧ ರಂದು ತುಮಕೂರು ಜಿಲ್ಲೆಗೆ ಆಗಮಿಸಲಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಆರ್.ಸಿ. ಆಂಜನಪ್ಪ ಮತ್ತು ಜಿಲ್ಲಾ ಉಸ್ತುವಾರಿ ವಿಧಾನ ಪರಿಷತ್ ಸದಸ್ಯ ತಿಪ್ಪೇ ಸ್ವಾಮಿ ತಿಳಿಸಿದರು.
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಜಂಟಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಥಮ ಹಂತದಲ್ಲಿ ಡಿ. ೧ ರಂದು ತುಮಕೂರು ನಗರ, ೨ ರಂದು ಮಧುಗಿರಿ, ೩ ರಂದು ಕೊರಟಗೆರೆ, ೪ ರಂದು ಪಾವಗಡ, ೫ ರಂದು ಶಿರಾ, ೬ ರಂದು ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಪಂಚ ರತ್ನ ರಥಯಾತ್ರೆ ಸಂಚರಿಸಲಿದೆ. ಅಂತೆಯೇ ಎರಡನೇ ಹಂತದ ರಥಯಾತ್ರೆಯು ಡಿ. ೧೧ ರಂದು ಚಿ.ನಾ.ಹಳ್ಳಿ, ೧೨ ರಂದು ತುರುವೇಕೆರೆ, ೧೩ ರಂದು ಕುಣಿಗಲ್ ಮತ್ತು  ೧೪ ರಂದು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.
ರಥ ಯಾತ್ರೆಯಲ್ಲಿ ಗ್ರಾಮೀಣ ಜನರಿಗೆ ಶಿಕ್ಷಣ, ಮೂಲಸೌಕರ್ಯ, ಉದ್ಯೋಗ, ಕೃಷಿ ಹಾಗೂ ಇನ್ನಿತರೆ ಸೌಕರ್ಯಗಳ  ಕುರಿತು ಜಾಗೃತಿ ಮೂಡಿಸುವ ಜೊತೆಗೆ ಪಕ್ಷದ ಸಂಘಟನೆಗೆ ಆದ್ಯತೆ ನೀಡಲಾಗುವುದು ಎಂದು ತಿಪ್ಪೇಸ್ವಾಮಿ ತಿಳಿಸಿದರು. ತುಮಕೂರಿಗೆ ಆಗಮಿಸುವ ಯಾತ್ರೆಯು ಮೊದಲಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಗಂಗಾ ಮಠಾಧ್ಯಕ್ಷ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ, ಸಿದ್ಧಗಂಗಾ ಮಠಾಧ್ಯಕ್ಷ ರಾದ ಶ್ರಿ ಸಿದ್ಧಲಿಂಗಸ್ವಾಮೀಜಿಗಳ ಆಶೀರ್ವಾದ ಪಡೆಯಲಿದೆ ಎಂದು ತುಮಕೂರು ನಗರ ನಿಯೋಜಿತ ಅಭ್ಯರ್ಥಿ ಗೋವಿಂದ ರಾಜು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ತಿಪ್ಪೇಸ್ವಾಮಿ ಅವರು ನಗರ ಕ್ಷೇತ್ರದ ಅಭ್ಯರ್ಥಿ ಯಾರು ಎಂಬ ಗೊಂದಲಗಳಿಗೆ ಪಕ್ಷದ ಮುಖಂಡರು ಅಂತ್ಯಹಾಡಿದ್ದು ಗೋವಿಂದರಾಜು ಅವರೇ ಪಕ್ಷದ ಅಧಿಕೃತ ಅಭ್ಯರ್ಥಿಯಾಗ ಲಿದ್ದಾರೆ ಎಂದರು.
ತುಮಕೂರು ನಗರ  ಕ್ಷೇತ್ರದ ದಿಬ್ಬೂರು ಕಾಲೋನಿಯ ದಲಿತರ ಮನೆಯಲ್ಲಿ, ಮಧುಗಿರಿ ತಾಲೂಕಿನಲ್ಲಿ ಮಾಡಗಾನ ಹಟ್ಟಿಯ ಯಾದವರ ಮನೆಯಲ್ಲಿ ಕುಮಾರಸ್ವಾಮಿಯವರು ವಾಸ್ತವ್ಯ ಮಾಡಲಿದ್ದಾರೆ ಎಂದರು.ಸುದ್ದಿಗೋಷ್ಟಿಯಲ್ಲಿ ಉಪಮೇಯರ್ ನರಸಿಂಹಮೂರ್ತಿ, ಶಾಸಕ ವೀರಭದ್ರಯ್ಯ, ಮಾಜಿ ಶಾಸಕರಾದ ಡಿ.ನಾಗರಾಜಯ್ಯ, ಸುಧಾಕರಲಾಲ್, ಗುಬ್ಬಿಯ ಸಂಭವನೀಯ ಅಭ್ಯರ್ಥಿ ನಾಗರಾಜು, ಶಿರಾದ ಉಗ್ರೇಶ್,ಬೆಳ್ಳಿಲೋಕೇಶ್, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ನಾಗರಾಜು , ವಕ್ತಾರ ಮಧುಸೂದನ್ ಇತರರು ಉಪಸ್ಥಿತರಿದ್ದರು.
ದಲಿತರ ಮನೆಯಲ್ಲಿ ವಾಸ್ತವ್ಯ
ಡಿ.1ರಂದು ರಾತ್ರಿ ದಿಬ್ಬೂರಿನ ಜೆಡಿಎಸ್ ಪರಿಶಿಷ್ಟಜಾತಿ ಘಟಕದ ನಗರದ ಅಧ್ಯಕ್ಷ ಹಾಗೂ ದಲಿತ ಸೇನೆಯ ಮುಖಂಡ ಭೈರೇಶ್ ಅವರ ಮನೆಯಲ್ಲಿ  ಮಾಜಿ ಸಿಎಂ ಕುಮಾರಸ್ವಾಮಿ ವಾಸ್ತವ್ಯ ಹೂಡಲಿದ್ದಾರೆ.