Sunday, 15th December 2024

Poisoning: ಕುಡಿಯುವ ನೀರಿಗೆ ವಿಷ ಹಾಕಿದ ದುಷ್ಟರು; ನೀರುಗಂಟಿ ಸಮಯಪ್ರಜ್ಞೆಯಿಂದ ಸಾವಿರಾರು ಜನ ಬಚಾವ್!‌

poisoning

ಹಟ್ಟಿ: ಗ್ರಾಮಕ್ಕೆ ಕುಡಿಯುವ ನೀರು (Drinking Water) ಪೂರೈಸುವ ಓವರ್‌ ಹೆಡ್‌ ಟ್ಯಾಂಕ್‌ (Overhead water tank) ನೀರಿಗೆ ದುಷ್ಕರ್ಮಿಗಳು ವಿಷ (Poisoning) ಬೆರೆಸಿದ್ದಾರೆ. ಆದರೆ ಇದನ್ನು ಗಮನಿಸಿದ ನೀರುಗಂಟಿ (Waterman), ತಕ್ಷಣವೇ ಅಲರ್ಟ್‌ ಆಗಿದ್ದರಿಂದ ಸಾವಿರಾರು ಜನರ ಜೀವ ಉಳಿದಿದೆ. ಘಟನೆ ಹಟ್ಟಿ (Kolar news) ಚಿನ್ನದ ಗಣಿ ಸಮೀಪದ ರೋಡಲಬಂಡಾ ಗ್ರಾಮ ಪಂಚಾಯತ್‌ ವ್ಯಾಪ್ತಿಯ ತವಗ ಗ್ರಾಮದಲ್ಲಿ ನಡೆದಿದೆ.

ಕಿಡಿಗೇಡಿಗಳು ಟ್ಯಾಂಕ್‌ ನೀರಿಗೆ ವಿಷ ಬೆರೆಸಿರುವುದನ್ನು ಪತ್ತೆ ಹಚ್ಚಿದ ನೀರುಗಂಟಿ (ವಾಟರ್‌ಮನ್‌) ಒಬ್ಬರು ತತ್‌ಕ್ಷಣವೇ ಗ್ರಾಮಕ್ಕೆ ನೀರು ಸರಬರಾಜು ತಡೆದು ಸಾವಿರಾರು ಜನರ ಜೀವ ಉಳಿಸಿದರು. ಗ್ರಾಮದಲ್ಲಿ 600ಕ್ಕೂ ಹೆಚ್ಚು ಮನೆಗಳಿದ್ದು, ಸಾವಿರಾರು ಜನ ಇದ್ದಾರೆ. 700ಕ್ಕೂ ಹೆಚ್ಚು ಜಾನುವಾರುಗಳಿವೆ. 50 ಸಾವಿರ ಲೀಟರ್‌ನ ಓವರ್‌ ಹೆಡ್‌ ನೀರಿನ ಟ್ಯಾಂಕ್‌ ಇಲ್ಲಿದ್ದು, ಇಲ್ಲಿಂದಲೇ ಇಡೀ ಗ್ರಾಮಕ್ಕೆ ನೀರು ಪೂರೈಸಲಾಗುತ್ತದೆ.

ಶನಿವಾರ ಸಂಜೆ ನೀರುಗಂಟಿ ಆದಪ್ಪ ಅವರು ಟ್ಯಾಂಕ್‌ನಿಂದ ನೀರು ಬಿಟ್ಟರು. ಆಗ ನೀರಿನಲ್ಲಿ ಕ್ರಿಮಿನಾಶಕದ ವಾಸನೆ ಮೂಗಿಗೆ ಬಡಿದಿದ್ದು, ತತ್‌ಕ್ಷಣ ಜಾಗೃತರಾದರು. ಮನೆಗಳ ನಲ್ಲಿಗಳಲ್ಲಿ ಬರುವ ನೀರನ್ನು ಪರೀಕ್ಷಿಸಿದ್ದು, ನೀರಲ್ಲಿ ಕ್ರಿಮಿನಾಶಕ ಸೇರಿರುವುದು ದೃಢಪಟ್ಟಿತು. ಕೂಡಲೇ ನೀರು ಪೂರೈಕೆ ಬಂದ್‌ ಮಾಡಿದ್ದಲ್ಲದೇ ಗ್ರಾಮಸ್ಥರಿಗೆ ನೀರು ಬಳಸದಂತೆ ಸೂಚಿಸಿದರು. ರವಿವಾರ ಬೆಳಗ್ಗೆ ಆಗಮಿಸಿದ ಪೊಲೀಸರು ಹಾಗೂ ತಾ.ಪಂ. ಅಧಿಕಾರಿಗಳು ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದಾರೆ.

ಟ್ಯಾಂಕನ್ನು ಸ್ವಚ್ಛಗೊಳಿಸಿದ್ದು, ಗ್ರಾಮಸ್ಥರಿಗೆ ಸದ್ಯ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕ್‌ ಬಳಿ ಕಳೆನಾಶಕ್ಕೆ ಬಳಸುವ ಕ್ರಿಮಿನಾಶಕದ ಬಾಟಲಿಗಳು ಪತ್ತೆಯಾಗಿವೆ. ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದಪ್ಪ ಅವರ ಸಕಾಲಿಕ ಕಾರ್ಯಾಚರಣೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Tumkur News: ವಿಷಮುಕ್ತ ಆಹಾರ ಬೆಳೆಯುವವನು ನಿಜವಾದ ರೈತ-ಸಿದ್ಧಲಿಂಗ ಸ್ವಾಮೀಜಿ