ಬಸವನಬಾಗೇವಾಡಿ: ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ ವೃತ್ತದ ಮುಂದೆ ಯಾರೋ ಕಿಡಿಗೆಡಿಗಳು ಕೋಳಿ ಮೊಟ್ಟೆಗಳನ್ನು ಒಡೆದಿರುವುದನ್ನು ಖಂಡಿಸಿ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ದಿನವಿಡಿ ಮಳೆಯನ್ನು ಲೆಕ್ಕಿಸದೇ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಡಿ.ಎಸ್.ಎಸ್. ಮುಖಂಡರಾದ ಅರವಿಂದ ಸಾಲವಾಡಗಿ, ಅಶೋಕ ಚಲವಾದಿ, ಪರಶುರಾಮ ದಿಂಡವಾರ ಮಾತನಾಡಿ, ಸವಿಂಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ವೃತ್ತದ ಮುಂದೆ ಮೊಟ್ಟೆ ಒಡೆದ ಕಿಡಿಗೇಡಿಗಳನ್ನು ಬಂಧಿಸಿ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿ ಪ್ರಮುಖ 4 ವೃತ್ತದಲ್ಲಿ ಸಿ.ಸಿ. ಕ್ಯಾಮರಾಗಳು ಇದ್ದು, ಅವುಗಳು ಕಳೆದ 2 ವರ್ಷದಿಂದ ಕಾರ್ಯನಿರ್ವಹಿಸುತ್ತಿಲ್ಲ. ಪುರಸಭೆ, ತಾಲ್ಲೂಕು ಆಡಳಿತಕ್ಕೆ ಹಲವಾರು ಸಂಘಟನೆಗಳು ಮನವಿ ಸಲ್ಲಿಸಿದರು ಕೂಡಾ ಸಿ.ಸಿ. ಕ್ಯಾಮರಾಗಳನ್ನು ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಇತಂಹ ಘಟನೆ ಜರುಗಿದೆ ಎಂದು ಆರೋಪಿಸಿದರು.
ಗುರು ಗುಡಿಮನಿ, ಮಹಾಂತೇಶ ಸಾಸಾಬಾಳ, ತಮ್ಮಣ್ಣ ಕಾನಾಗಡ್ಡಿ, ಖಾಜಂಬರ ನದಾಫ್ ಮಾತನಾಡಿದರು.
ಪ್ರತಿಭಟನಾ ಸ್ಥಳಕ್ಕೆ ಗ್ರೇಡ್-2 ತಹಶೀಲ್ದಾರ ಪಿ.ಜೆ.ಪವಾರ, ಪುರಸಭೆ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಭೇಟಿ ನೀಡಿ, 2-3 ದಿನಗಳಲ್ಲಿ ಸಿ.ಸಿ. ಕ್ಯಾಮರಾವನ್ನು ದುರಸ್ತಿ ಮಾಡಿಸುವುದಾಗಿ ಭರವಸೆ ನೀಡಿದರು ಕೂಡಾ ತಕ್ಷಣವೇ ಸಿ.ಸಿ ಕ್ಯಾಮರಾ ದುರಸ್ತಿ ಮಾಡಿಸಬೇಕು. ಕಿಡಿಗೇಡಿಗಳನ್ನು ಬಂಧಿಸ ಬೇಕು ಎಂದು ಪ್ರತಿಭಟನೆಯನ್ನು ಮುಂದುವರೆಸಿದರು. ನಂತರ ಸಿ.ಸಿ. ಕ್ಯಾಮರಾ ದುರಸ್ತಿಗೆ ಪುರಸಭೆ ಮುಂದಾಯಿತು.
ಈಗಾಗಲೇ ಕೃತ್ಯ ಏಸಗಿದ 3 ಜನರನ್ನು ಬಂಧಿಸಲಾಗಿದೆ. ಇನ್ನುಳಿದವರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಯಮನೂರಿ ಚಲವಾದಿ, ಸಂಜು ಕಲ್ಯಾಣಿ, ಪ್ರಭು ನಾಟಿಕಾರ, ಬಸು ದೊಡ್ಡಮನಿ, ವೈ.ಎಸ್.ಮ್ಯಾಗೇರಿ, ಚಂದ್ರಶೇಖರ ನಾಲತವಾಡ, ಪರಶುರಾಮ ಚಲವಾದಿ, ಆನಂದ ಚಲವಾದಿ, ಅಶೋಕ ನಡುವಿನಮನಿ, ಮಹಾಂತೇಶ ಚಕ್ರವರ್ತಿ, ಗಂಗಾಧರ ಇಂಗಳೇಶ್ವರ, ಸಂಗಮೇಶ ದೊಡ್ಡಮನಿ, ಗಂಗಾಧರ ಆರೇರ, ಶೇಖಪ್ಪ ಕಾಣಿ, ಮಲ್ಲಿಕಾರ್ಜುನ ಬುರ್ಲಿ ಇತರರು ಭಾಗವಹಿಸಿದ್ದರು.