ಗೌರಿಬಿದನೂರು : ನಗರದ ತಾ.ಪಂ ಆವರಣದಲ್ಲಿ ಗುರುವಾರ ಬೆಳಿಗ್ಗೆ ತಹಸೀಲ್ದಾರ್ ಮಹೇಶ್ ಎಸ್ ಪತ್ರಿ ರವರ ನೇತೃತ್ವದಲ್ಲಿ ಸ್ಥಳೀಯ ನಗರಸಭೆ ಮತ್ತು ತಾಲ್ಲೂಕು ಆಡಳಿದ ಸಹಯೋಗದೊಂದಿಗೆ ಸುಮಾರು ೩೦ ಕ್ಕೂ ಹೆಚ್ಚು ಮಂದಿ ದಿನಪತ್ರಿಕೆ ವಿತರಕರಿಗೆ ಚಳಿ, ಮಳೆ ರಕ್ಷಣೆಗಾಗಿ ಉತ್ತಮ ಗುಣಮಟ್ಟದ ರೈನ್ ಕೋಟ್ ಗಳನ್ನು ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಈ ವೇಳೆ ಮಾತನಾಡಿದ ತಹಸೀಲ್ದಾರ್ ಮಹೇಶ್ ಎಸ್ ಪತ್ರಿ, ವರ್ಷದ 361 ದಿನಗಳ ಕಾಲ ಮಳೆ, ಚಳಿ, ಗಾಳಿ ಎನ್ನದೆ ತಮ್ಮ ಜೀವದ ಹಂಗು ತೊರೆದು ನಿತ್ಯ ದಿನಪತ್ರಿಕೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪತ್ರಿಕಾ ಏಜೆಂಟ್ ಮತ್ತು ವಿತರಕರ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಶ್ರಮಿಕರನ್ನು ಗುರ್ತಿಸಿ ಅವರಿಗೆ ಅಗತ್ಯವಿರುವ ರೈನ್ ಕೋಟ್ ಗಳನ್ನು ವಿತರಣೆ ಮಾಡಲಾಗಿದೆ. ಕನಿಷ್ಠ ವೇತನದೊಂದಿಗೆ ನಿತ್ಯ ಸೈಕಲ್‌ಗಳನ್ನು ಏರಿ ಐದಾರು ಕಿ.ಮೀ ವರೆಗೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮನೆಮನೆಗೆ ಸಂಚಾರ ಮಾಡಿ ದಿನಪತ್ರಿಕೆಗಳನ್ನು ವಿತರಣೆ ಮಾಡುವ ಮೂಲಕ ದೇಶ, ರಾಜ್ಯ, ಅಂತರಾಷ್ಟ್ರೀಯ ಮಟ್ಟದ ವಿವಿಧ ಸುದ್ದಿಗಳನ್ನು ಓದುಗರ ಮನಸ್ಸಿಗೆ ತಲಿಪಿಸುವ ಕಾರ್ಯ ಮಾಡುತ್ತಿದ್ದಾರೆ. ಅವರ ಬದುಕಿಗೆ ಯಾವುದೇ ಭದ್ರತೆಯಿಲ್ಲದೆ ಶ್ರಮಿಸುವ ಇವರಿಗೆ ತಾಲ್ಲೂಕು ಆಡಳಿತ ಮತ್ತು ನಗರಸಭೆಯಿಂದ ಈ ಪುಟ್ಟ ಸಹಕಾರ ಮಾಡುತ್ತಿದ್ದೇವೆ ಎಂದು ಹೇಳಿದರು.
ವರದಿಗಾರ ಮತ್ತು ಪತ್ರಿಕಾ ವಿತರಕರಾದ ಕೆ.ಪಿ.ಸಮೀರಚಾರಿ ಮಾತನಾಡಿ, ಪ್ರತಿನಿತ್ಯ ನಗರದ ವಿವಿಧ ಮನೆಗಳಿಗೆ ದಿನಪತ್ರಿಕೆಗಳನ್ನು ವಿತರಣೆ ಮಾಡುವ ಶ್ರಮಿಕ ಬಾಲಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇದರ ಬಗ್ಗೆ ತಹಸೀಲ್ದಾರ್ ರವರ ಗಮನಕ್ಕೆ ತಂದಾಗ ಶೀಘ್ರದಲ್ಲೇ ಸ್ಪಂಧಿಸಿ ಮಳೆ ಮತ್ತು ಚಳಿಯ ರಕ್ಷಣೆಗಾಗಿ ರೈನ್ ಕೋಟ್ ಗಳನ್ನು ವಿತರಣೆ ಮಾಡಿ ನಿಜಕ್ಕೂ ನಮ್ಮೆಲ್ಲರ ಸುರಕ್ಷಿತ ಆರೋಗ್ಯಕ್ಕೆಸಹಕಾರಿಯಾಗಿದ್ದಾರೆ. ಸಮಾಜದಲ್ಲಿ ಪತ್ರಿಕಾ ವಿತರಕರಿಗೂ ಸೂಕ್ತ ಸ್ಥಾನಮಾನ ದೊರೆಯಬೇಕು ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದು ಹೇಳಿದರು.
ಈ ವೇಳೆ ಪತ್ರಿಕಾ ವಿತರಕರಾದ ಸಮೀರ ಚಾರಿ, ಕೆ.ಎನ್.ನರಸಿಂಹಮೂರ್ತಿ, ಎಸ್.ವಿ.ಅರುಣ್ ಕುಮಾರ್, ಎ.ರವಿ ಕುಮಾರ್, ಜಿ.ಎನ್. ಅಶ್ವತ್ಥನಾರಾಯಣ, ಮುಕುಂದ, ಶ್ರೀನಿವಾಸ್. ರಾಜೇಶ್. ಶಿವ ಕುಮಾರ್.ಧನಂಜಯ, ಪ್ರದೀಪ್, ಪುನೀತ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಇದನ್ನೂ ಓದಿ: chikkaballapurnews