Thursday, 12th December 2024

ಮಳೆ ಅವಾಂತರ: ಸೌಂದರ್ಯ ಕಳೆದುಕೊಂಡ ಸ್ಮಾರ್ಟ್ ಸಿಟಿ

ವರುಣಾರ್ಭಟ
ಜನತೆ ಸಂಕಟ
ಸಂಚಾರಕ್ಕೆ ಪರದಾಟ
ರಂಗನಾಥ ಕೆ.ಮರಡಿ
ತುಮಕೂರು: ಮಳೆಯ ಅವಾಂತರದಿಂದಾಗಿ ನಗರದ ತುಂಬೆಲ್ಲಾ ನೀರು ತುಂಬಿಕೊಂಡು ಸ್ಮಾರ್ಟ್ ಸಿಟಿಯಲ್ಲಿ ಜನತೆ ಪರದಾಡುವಂತಾಗಿತ್ತು.
 ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ  ನಗರ ಪ್ರದೇಶದ ಕೆಲ ತಗ್ಗು ಪ್ರದೇಶ ಗಳು ಜಲಾವೃತಗೊಂಡಿರುವುದರಿಂದ  ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿತ್ತು.
ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರಿನಿಂದಾಗಿ ಶೆಟ್ಟಿಹಳ್ಳಿ ಗೇಟ್‌ನಲ್ಲಿರುವ ರೈಲ್ವೆ ಅಂಡರ್ ಪಾಸ್, ಕುಣಿಗಲ್ ರಸ್ತೆಯ ಅಂಡರ್ ಪಾಸ್, ಅಳಶೆಟ್ಟಿಕೆರೆ ಪಾಳ್ಯದಲ್ಲಿರುವ ಬಾಲಕಿಯ ಬಾಲಮಂದಿರ ಸ್ವೀಕಾರ ಕೇಂದ್ರ, ಆದಾಯ ತೆರಿಗೆ ಇಲಾಖೆ ಕಚೇರಿ ಆವರಣ, ಸಿದ್ದಗಂಗಾ ಬಡಾವಣೆ ಸೇರಿದಂತೆ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನರು ಮಳೆ ನೀರನ್ನು ಹೊರ ಹಾಕಲು ಹರಸಾಹಸ ಪಡುವಂತಾಯಿತು.
ಸಿದ್ದಗಂಗಾ ಬಡಾವಣೆ ಸೇರಿದಂತೆ ನಗರದ ವಿವಿಧೆಡೆ ತಗ್ಗುಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ  ನಿವಾಸಿಗಳು ಇಡೀ ರಾತ್ರಿ ನಿದ್ದೆಯಿಲ್ಲದೆ ಮನೆಗೆ ನುಗ್ಗಿದ ಮಳೆ ನೀರನ್ನು ಹೊರ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕುಣಿಗಲ್ ರಸ್ತೆ ಮತ್ತು ಶೆಟ್ಟಿಹಳ್ಳಿ ಗೇಟ್‌ನ ಅಂಡರ್‌ಪಾಸ್‌ಗಳು ಮಳೆ ನೀರಿನಿಂದ ಜಲಾವೃತಗೊಂಡಿದ್ದರಿಂದ ರಾತ್ರಿ ವಾಹನಗಳು ಸಂಚರಿಸಲು ಪರದಾಡುವಂತಾಗಿತ್ತು. ಬುಧವಾರ ಬೆಳಗ್ಗೆ ವೇಳೆಗೆ ನೀರು ಕಡಿಮೆಯಾಗಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುವಾಯಿತು.
ಕೆರೆಯಾದ ಅಂಡರ್‌ಪಾಸ್
ಶೆಟ್ಟಿಹಳ್ಳಿ ಅಂಡರ್ ಪಾಸ್‌ನಲ್ಲಿ ಆರಡಿಗೂ ಹೆಚ್ಚು ನೀರು ನಿಂತು ಕೆರೆಯಂತಾ ಗಿದ್ದರಿಂದ ತೀವ್ರ ತೊಂದರೆ ಉಂಟಾಗಿತ್ತು. ಸ್ಮಾರ್ಟ್ ಸಿಟಿ ತುಮಕೂರಿಗೆ ಸ್ಮಾರ್ಟ್ಸಿಟಿ ಯೋಜನೆಗಳು ಜಾರಿಯಾದ ಮೇಲೆ ಪ್ರತಿ ವರ್ಷ ಮಳೆ ಪ್ರಾರಂಭವಾದ ಕೂಡಲೇ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ.
ವರ್ಷದ ಮೊದಲ ಮಳೆಗೆ ಶೆಟ್ಟಿಹಳ್ಳಿ ಅಂಡರ್ ಪಾಸ್ ಮತ್ತು ಕೋತಿ ತೋಪಿನಲ್ಲಿ ಕೆರೆಯಂತೆ ನೀರು ನಿಂತಿವೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗಿರುವ ಈ ಅಂಡರ್ ಪಾಸ್, ನಿರ್ಮಾಣವಾದ ಮೇಲೆ ನನಗೂ, ಅಂಡರ್ ಪಾಸ್‌ಗೂ ಸಂಬಂಧ ವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಮಳೆಗಾಲ ಪ್ರಾರಂಭಕ್ಕೂ ಮುನ್ನ ಎಚ್ಚೆತ್ತು ಶೆಟ್ಟಿಹಳ್ಳಿ, ಮಾರುತಿನಗರ, ನೃಪತುಂಗ ಬಡಾವಣೆ, ಜಯನಗರ, ಬಡಾವಣೆಗಳ ಜನರ ಬವಣೆಯನ್ನು ಈಗಲಾದರೂ ಸಂಬಂಧಪಟ್ಟವರು ಗಮನಿಸಿ ಅಂಡರ್ ಪಾಸ್‌ನಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಮಳೆಯ ಅವಾಂತರ ದಿಂದಾಗಿ ಸ್ಮಾರ್ಟ್ ಸಿಟಿ ತುಮಕೂರು ಸೌಂದರ್ಯ ಕಳೆದುಕೊಂಡಿತ್ತು.
*

ತುಮಕೂರು ಸ್ಮಾರ್ಟ್ ಸಿಟಿ ಗಬ್ಬೆದ್ದು ನಾರುತ್ತಿದೆ. ಮಳೆ ನೀರು ಸರಾಗವಾಗಿ ಹರಿಯದೆ ಎಲ್ಲೆಂದರಲ್ಲಿ ನಿಂತು ಜನರು ಓಡಾಡಲು ತೊಂದರೆಯಾಗಿದೆ. ಇದಕ್ಕೆ ಶಾಸಕ ಜ್ಯೋತಿಗಣೇಶ್, ಸಂಸದ ಬಸವರಾಜ್ ಕಾರಣ. ಸ್ಮಾರ್ಟ್ ಸಿಟಿ ಕಾಮಗಾರಿ ಸರಿಯಾಗಿ ನಡೆದಿಲ್ಲ. ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ಮಾಡಲಾಗಿದ್ದು, ಸಾಕಷ್ಟು ಅವ್ಯವಹಾರ ನಡೆದಿದೆ. ಈ ಅವ್ಯವಹಾರವನ್ನು ಸಿಬಿಐ ತನಿಖೆಗೆ ವಹಿಸಬೇಕು.

ಮಾಜಿ ಸಚಿವ ಸೊಗಡು ಶಿವಣ್ಣ

ಮಳೆಯ ಕಾರಣದಿಂದಾಗಿ ನಗರದಲ್ಲಿ ಕೆಲವು ಕಡೆ ನೀರು ನಿಂತು ಜನರಿಗೆ ತೊಂದರೆಯಾಗಿತ್ತು. ಸಂಬಂಧಿಸಿದ ಅಧಿಕಾರಿ ಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ. ಹಲವು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗಿದೆ.

ಜ್ಯೋತಿಗಣೇಶ್, ಶಾಸಕ.