Thursday, 12th December 2024

Road Accident: ಹೊಸಮನೆ ಹೊಸ್ತಿಲು ತುಳಿದ ಎರಡೇ ದಿನದಲ್ಲಿ ನವವಧು ಆಕ್ಸಿಡೆಂಟ್‌ಗೆ ಬಲಿ

road accident bride death

ಮಂಗಳೂರು: ಮದುವೆಯಾಗಿ ಗಂಡನ ಮನೆಯ ಹೊಸ್ತಿಲು ತುಳಿದ ಎರಡೇ ದಿನದಲ್ಲಿ ನವವಧು ಹಾಗೂ ವರ ದಾರುಣ ರಸ್ತೆ (Road Accident) ಅಪಘಾತಕ್ಕೀಡಾಗಿ, ವಧು ಮೃತಪಟ್ಟ (Bride Death) ಹಾಗೂ ವರ ತೀವ್ರವಾಗಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ಬಳಿ ನಡೆದಿದೆ.

ಬಂಟ್ವಾಳ ತಾಲೂಕಿನ ತಲಪಾಡಿ ಎಂಬಲ್ಲಿ ರಸ್ತೆ ಅಪಘಾತ ನಡೆದಿದೆ. ಕಾರು ಅಪಘಾತದಲ್ಲಿ ವಧು ಸಾವನ್ನಪ್ಪಿದ್ದು, ಪತಿಗೆ ತೀವ್ರ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ ಮೃತರು. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅನಿಶ್ ಕೃಷ್ಣ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರಿಬ್ಬರೂ ಎರಡು ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರೂ ಮಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಬಿಸಿ ರಸ್ತೆಯಿಂದ ಮಂಗಳೂರು ಕಡೆಗೆ ಆಲ್ಟೋ ಕಾರಿನಲ್ಲಿ ನವದಂಪತಿಗಳು ಪ್ರಯಾಣಿಸುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಗುದ್ದಿದೆ. ನಂತರ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮಾನಸ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪತಿ ಅನಿಶ್ ಕೃಷ್ಣಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆ. 05 ರಂದು ದೇಂತಡ್ಕ ದೇವಸ್ಥಾನದಲ್ಲಿ ಇಬ್ಬರ ಮದುವೆ ನೆರವೇರಿತ್ತು. ಮದುವೆ ಕಾರ್ಯಕ್ರಮದ ವಿಚಾರವಾಗಿ ಲೆಕ್ಕಾಚಾರ ಮಾಡಲು ದಂಪತಿಗಳು ದೇಂತಡ್ಕ ದೇವಸ್ಥಾನಕ್ಕೆ ಬಂದಿದ್ದರು. ವಾಪಸ್ ಮನೆಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು

ಬೆಂಗಳೂರು: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ. ಚಿಕಿತ್ಸೆ ಫಲಿಸದೆ ಅನುಷಾ ಎಂಬವರು ಕೊನೆಯುಸಿರೆಳೆದಿದ್ದಾರೆ. 2 ದಿನದ ಹಿಂದೆ ಅನುಷಾ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

ಘಟನೆ ಬೆಂಗಳೂರಿನ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. 5 ವರ್ಷದ ಹಿಂದೆ ಶ್ರೀಹರಿ ಜೊತೆ ಅನುಷಾ ಮದುವೆ ಆಗಿತ್ತು. ಶ್ರೀಹರಿ, ಅನುಷಾ ದಂಪತಿಗೆ ಎರಡು ವರ್ಷದ ಮಗು ಕೂಡ ಇದೆ. ಪತಿಯ ಅನೈತಿಕ ಸಂಬಂಧದ ವಿಚಾರವಾಗಿ ದಂಪತಿ ನಡುವೆ ಗಲಾಟೆಯಾಗುತ್ತಿದ್ದು, ಇದರಿಂದ ಮನನೊಂದು ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರ ಗಾಯಗೊಂಡಿದ್ದ ಅನುಷಾಳನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಓದಿ: Vinayakan: ಏರ್‌ಪೋರ್ಟ್‌ ಸಿಬ್ಬಂದಿ ಮೇಲೆ ಹಲ್ಲೆ‌ ಮಾಡಿದ ʼವಿಲನ್‌ʼ ವಿನಾಯಕನ್ ಬಂಧನ