ಕೊರಟಗೆರೆ: ಬೆಳ್ಳಂಬೆಳಗ್ಗೆ ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕಂಬದಹಳ್ಳಿ ಹತ್ತಿರ ಸೋಮವಾರ ನಡೆದಿದೆ. ಗೋವಾಕ್ಕೆ ಹೋಗಿ ವಾಪಸ್ ಬರುವಾಗ ಭೀಕರ ಅಪಘಾತ (Road Accident) ನಡೆದಿದೆ.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮದ ಬಸಣ್ಣನವರ ಮಗ ಪ್ರವೀಣ್ (23) ಹಾಗೂ ರಂಗನಾಥನವರ ಮಗ ಹರ್ಷೀತ್ (22) ಮೃತ ದುರ್ದೈವಿಗಳು. ಗೋವಾಕ್ಕೆ ಹೋಗಿ ಬರುವಾಗ ಕಂಬದಹಳ್ಳಿ ಗ್ರಾಮದ ಆನಂದ್ ಎಂಬುವರಿಗೆ ಸೇರಿದ ಲಾರಿಗೆ ಡಿಕ್ಕಿ ಸಂಭವಿಸಿದೆ. ಅತಿ ವೇಗವಾಗಿ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದಾರೆ.
ಮೂವರು ಸ್ನೇಹಿತರು ಗೋವಾಕ್ಕೆ ಹೋಗಿದ್ದರು. ಈ ಮೂವರ ಪೈಕಿ ಹರ್ಷಾ ಎಂಬುವರು ತುಮಕೂರು ಜಿಲ್ಲೆಯ ಶಿರಾದಲ್ಲಿ ಇಳಿದಿದ್ದಾರೆ. ಈಗ ನಿದ್ದೆ ಬರುತ್ತಿದೆ, ನಾವು ನಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಬೆಳಗ್ಗೆ ಊರಿಗೆ ಹೋಗೋಣ ಎಂದು ಹೇಳಿದರೂ ಕೇಳದೆ ಇಬ್ಬರು ಅಲ್ಲಿಂದ ಬಂದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಮಧುಗಿರಿ ಕಡೆಯಿಂದ ಇಟಿಯೊಸ್ ಕಾರು ಬೆಳಗಿನ ಜಾವ ಸುಮಾರು 3.30 ಗಂಟೆಗೆ ಬಂದಿದೆ. ಅದೆ ಸಮಯಕ್ಕೆ ಲಾರಿ ಸಹ ಕಂಬದಹಳ್ಳಿಯಿಂದ ರಸ್ತೆಗೆ ಬಂದ ಸಮಯದಲ್ಲಿ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದ ಸ್ಥಳದಲ್ಲೇ ಹರ್ಷೀತ್ ಸಾವನ್ನಪ್ಪಿದ್ದಾರೆ. ಉಸಿರಾಡುತಿದ್ದ ಪ್ರವೀಣ್‌ನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಬೆಳಧರ ಗ್ರಾಮದ ಬಳಿ ಕೊನೆಯುಸಿರು ಎಳೆದಿದ್ದಾರೆ ಎನ್ನಲಾಗಿದೆ.
ಅಪಘಾತ ಸಂಭವಿಸಲು ಅತಿ ವೇಗ ಕಾರಣ ಎಂದು ಹೇಳಲಾಗುತ್ತಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಕೊರಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | Digital Arrest: ‘ಡಿಜಿಟಲ್ ಅರೆಸ್ಟ್’ ಜಾಲಕ್ಕೆ ಯೂಟ್ಯೂಬರ್ ಟ್ರ್ಯಾಪ್! 40 ಗಂಟೆಗಳ ಕಾಲ ಬಂಧಿಯಾಗಿದ್ದು ಹೇಗೆ?
3ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು
ಚಾಮರಾಜನಗರ: ಇತ್ತೀಚೆಗೆ ಸಣ್ಣ ವಯಸ್ಸಿನವರಲ್ಲೂ ಹೃದಯಾಘಾತ ಪ್ರಕರಣಗಳು (Heart Attack) ಹೆಚ್ಚಾಗುತ್ತಿವೆ. ಸಾಮಾನ್ಯವಾಗಿ ತೂಕ ಹೆಚ್ಚಳ, ರಕ್ತದೊತ್ತಡದಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗುತ್ತದೆ. ಆದರೆ, ಇದೀಗ ಚಾಮರಾಜನಗರದಲ್ಲಿ 3ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವುದು ಕಂಡುಬಂದಿದೆ.
ಚಾಮರಾಜನಗರದ ಸೆಂಟ್ ಫ್ರಾನ್ಸಿಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ಶಿಕ್ಷಕರಿಗೆ ನೋಟ್ಸ್ ತೋರಿಸಲೆಂದು ತೆರಳುತ್ತಿದ್ದಳು. ಈ ವೇಳೆ ತೇಜಸ್ವಿನಿ ಏಕಾಏಕಿ ಕುಸಿದು ಬಿದ್ದಿದ್ದಾಳೆ. ತಕ್ಷಣ ವಿದ್ಯಾರ್ಥಿನಿಯನ್ನು ಶಿಕ್ಷಕರು ಆಸ್ಪತ್ರೆಗೆ ಕರೆದೊಯ್ದಿದ್ದು, ದುರಾದೃಷ್ಟವಶಾತ್ ಆಸ್ಪತ್ರೆಗೆ ತರುವಷ್ಟರಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.