Monday, 25th November 2024

Robbery: ಸೋರಲಮಾವು ಗ್ರಾಮದಲ್ಲಿ ಸರಣಿ ಕಳ್ಳತನ

ಚಿ.ನಾ.ಹಳ್ಳಿ: ತಾಲೂಕಿನ ಹಂದನಕೆರೆ ಹೋಬಳಿ ಸೋರಲಮಾವು ಗ್ರಾಮದಲ್ಲಿ ಭಾನುವಾರ ರಾತ್ರಿ ನಾಲ್ಕು ಮನೆಗಳಲ್ಲಿ ಕಳ್ಳತನ ನಡೆದಿದ್ದು ಹಂದನಕೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋರಲಮಾವು ಗ್ರಾಮದಲ್ಲಿ ಮನೆಗೆ ಬೀಗ ಹಾಕಿದ್ದ ರಾಮಚಂದ್ರಯ್ಯ, ನರಸಿಂಹಯ್ಯ, ರಂಗಸ್ವಾಮಿ ಹಾಗೂ ಕರಿಯಪ್ಪ ಎಂಬುವವರ ಮನೆಯ ಬೀಗ ಮುರಿದು ಮನೆಯಲ್ಲಿದ್ದ ನಗದು, ಒಡವೆ ದೋಚಿ ಪರಾರಿಯಾಗಿದ್ದಾರೆ. ಗ್ರಾಮದಲ್ಲಿ ಈ ಹಿಂದೆಯೂ ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮಕೈಗೊಳ್ಳದಿರುವುದು ಸ್ಥಳಿಯರಲ್ಲಿ ಭಯ ಹೆಚ್ಚಿಸಿದೆ.

ಕಳೆದೊಂದು ತಿಂಗಳಿನಿಂದಲೂ ಚಿಕ್ಕನಾಯಕನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಗ ಹಾಕಿರುವ ಮನೆ ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಪ್ರಕರಣ ವರದಿಯಾಗುತ್ತಲೇ ಇದೆ. ಹಗಲಿನಲ್ಲಿ ಮಿಕ್ಸಿ ಮಾರುವ ನೆಪದಲ್ಲಿ ಹಿಂದಿ, ಕನ್ನಡ ಮಾತನಾಡುವ ಅಪರಿಚಿತರು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು ಅವರು ಬಂದು ಹೋಗುವ ದಿನವೇ ಕಳ್ಳತನ ಪ್ರಕರಣ ವರದಿಯಾಗುತ್ತಿವೆ.