ಚಿಕ್ಕನಾಯಕನಹಳ್ಳಿ: ಶಕ್ತಿಮಾತೆ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಾಲಯಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಬಹುಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲು ಸಂಕಲ್ಪಿಸಲಾಗಿದೆ ಎಂದು ದೇವಾಲಯದ ಆಡಳಿತ ಮುಖ್ಯಸ್ಥರಾದ ಲಕ್ಷ್ಮೀಶ್ ತಿಳಿಸಿದರು.
ಪಟ್ಟಣದಲ್ಲಿ ಯೋಜನೆಗೆ ಚಾಲನೆ ನೀಡಿ ಮಾಹಿತಿ ನೀಡಿದ ಅವರು ಪುರಾತನ ಧಾರ್ಮಿಕ ಐತಿಹ್ಯವಿರುವ ಶ್ರೀ ಮಹಾಲಕ್ಷ್ಮೀ ಮದ್ದರ ಲಕ್ಕಮ್ಮ ಹಾಗು ಕಾರುಣಿಕದ ದೈವ ದೂತರಾಯ ಸ್ವಾಮಿ ಕ್ಷೇತ್ರಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದು ಅವರಿಗೆ ಅಗತ್ಯ ಮೂಲ ಭೂತ ಸೌಲಭ್ಯ ಕಲ್ಪಸಲು ಚಿಂತನೆ ನಡೆಸಲಾಗಿದ್ದು ಈ ದೆಸೆಯಲ್ಲಿ ಸಮಿತಿ ಕಾರ್ಯಪ್ರವೃತ್ತವಾಗಿದೆ.
ಮೂರು ಮಹಡಿಯ ಭವನ ನಿರ್ಮಾಣವಾಗುತ್ತಿದ್ದು ಪ್ರಾರ್ಥನಾ ಮಂದಿರ, ಅನ್ನಛತ್ರ, ಹಾಗು ವಸತಿ ನಿಲಯ ನಿರ್ಮಿಸಲು ಯೋಜನೆ ಹಾಕಿಕೊಳ್ಳ ಲಾಗಿದೆ. ದಿವಂಗತ ಹೊನ್ನಮ್ಮ ನಿರ್ವಾಣಯ್ಯ ಕಂದಾಯ ಇಲಾಖೆ ಇವರ ಕುಟುಂಬ ವರ್ಗ ಸ್ವ ಇಚ್ಚೆಯಿಂದ ನಿವೇಶನವನ್ನು ದಾನವಾಗಿ ನೀಡಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ದೇವಾಲಯದ ಜೀರ್ಣೋದ್ದಾರ ಕಾರ್ಯದ ಯಶಸ್ವಿಗಾಗಿ ಅಧ್ಯಕ್ಷರಾಗಿ ಚಿ.ನಿ.ಪುರುಷೋತ್ತಮ್, ಧರ್ಮದರ್ಶಿಗಳಾಗಿ ರಂಗಸ್ವಾಮಿ, ಒಳಗೊಂಡ ಸಮಿತಿ ರಚಿಸಲಾಗಿದೆ.
ದೇವಸ್ಥಾನವು ಕೇವಲ ಪೂಜೆ, ಉತ್ಸವಾದಿಗಳಿಗೆ ಸೀಮಿತವಾಗದೆ ಹಿಂದಿನ ಕಲ್ಪನೆಯಂತೆ ಜನತೆಯ ಎಲ್ಲಾ ಸಮಸ್ಯೆ ನಿವಾರಣೆಯ ತಾಣ ವಾಗಬೇಕು. ಪ್ರಗತಿಗೆ ಪೂರಕವಾದ ನಾನಾ ಸಾಧ್ಯತೆಗಳು ಇಲ್ಲಿ ತೆರೆದುಕೊಳ್ಳಬೇಕು. ದೇವಸ್ಥಾನ ಸಮಾಜದ ಪ್ರಧಾನ ಕೇಂದ್ರವಾಗಬೇಕು ಎಂಬ ನೆಲೆಯಲ್ಲಿ ದೇವಸ್ಥಾನವನ್ನು ರೂಪಿಸಲಾಗುತ್ತಿದೆ ಎಂದು ಲಕ್ಷ್ಮೀಶ್ ವಿವರಿಸಿದರು.
ಇದನ್ನೂ ಓದಿ: #TumkurBreaking