Monday, 25th November 2024

Tumkur News: ಪ್ರತಿಭೆ ವ್ಯಕ್ತಪಡಿಸಲು ಕಾಲೇಜು ಮ್ಯಾಗ್ ಜೀನ್ ಸೃಜನಶೀಲ ವೇದಿಕೆ 

ತುಮಕೂರು: ವಿದ್ಯಾರ್ಥಿ ಯುವಜನರಲ್ಲಿರುವ ಸುಪ್ತ ಪ್ರತಿಭೆಗಳನ್ನು, ಅವರಲ್ಲಿನ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ಕಾಲೇಜು ಮ್ಯಾಗ ಜೀನ್  ಸೃಜನಶೀಲ ವೇದಿಕೆ. ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತಾಗಬೇಕು ಎಂದು ಹಂಪಿ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸರಕಾರಿ ಪದವಿ ಕಾಲೇಜಿನ ವಿಶ್ವಮಾನವ ಸಭಾಂಗಣದಲ್ಲಿ ಕಾಲೇಜಿ ಶಿಕ್ಷಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2024ನೇ ಸಾಲಿನ ವಾರ್ಷಿಕ ಸ್ಮರಣ ಸಂಚಿಕೆ ತುಂಬೆ ಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸ್ಮರಣ ಸಂಚಿಕೆಗಳಿಗೆ ಎನಾದರೊಂದು ಬರೆಯುವ ಮೂಲಕ ನಿಮ್ಮ ಇರುವಿಕೆಯನ್ನು ವ್ಯಕ್ತಪಡಿಸುವಂತೆ ಸಲಹೆ ನೀಡಿದರು.

ಇಂದಿನ ಸೆಮಿಸ್ಟರ್ ಶಿಕ್ಷಣ ಪದ್ದತಿ ಕೇವಲ ಅಂಕ ಗಳಿಕೆಗಷ್ಟೇ ಸಿಮಿತವಾಗಿದೆ.ಆಟೋಟಗಳಿಗೆ, ಪಠ್ಯೇತರ ಚಟುವಟಿಕೆ ಗಳಿಗೆ ಅವಕಾಶವೇ ಇಲ್ಲದಂತಾಗಿದೆ. ಇದರ ನಡುವೆಯೂ ಕೆಲವರು ತುಂಬೆ ಸ್ಮರಣ ಸಂಚಿಕೆಗೆ ಕಥೆ, ಕವನ, ಲೇಖನಗಳನ್ನು ಬರೆದಿದ್ದೀರ.ಮುಂದಿನ ವರ್ಷದ ಸಂಚಿಕೆಯಲ್ಲಿ ಇದು ದುಪ್ಪಟ್ಟಾಗಬೇಕು.ತುಂಬೆ ಅತ್ಯಂತ ನಿಕೃಷ್ಟವಾಗಿರುವ ಗಿಡ ಆದರೆ ಅದರ ಹೂವು ಶಿವನಿಗೆ ಶ್ರೇಷ್ಠ. ತುಮಕೂರು ಜಿಲ್ಲೆ ಸಹ ಬಡತನ, ಸಿರಿತನ ಎರಡನ್ನು ಹೊಂದಿದೆ.ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ,ಐತಿಹಾಸಿಕವಾಗಿ ಬಹಳ ಪ್ರಸಿದ್ದಿ ಪಡೆದಿದೆ. ನಿಧಾನವಾಗಿ ವಿದ್ಯಾಕಾಶಿಯಾಗಿ ಪರಿವರ್ತನೆಯಾಗುತ್ತಿದೆ. ಕೈಗಾರಿಕೆಗಳಲ್ಲಿ ದೇಶದ ಎರಡನೇ ಅತಿದೊಡ್ಡ ಕೈಗಾರಿಕಾ ಹಬ್ ಹೊಂದಿದ ನಗರವಾಗಿದೆ.ಇಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಲು ನೀವೆಲ್ಲರೂ ಸಿದ್ದರಾಗಬೇಕು.ನಿರಾಶಾ ಮನೋಭಾವನೆ ಬಿಟ್ಟು, ಆಶಾವಾದಿಗಳಾಗಿ ಸಮಾಜದಲ್ಲಿ ಬದಲಾವಣೆಗೆ ಮುನ್ನುಡಿ ಬರೆಯುವಂತೆ  ಸಲಹೆ ನೀಡಿದರು.

ಉರ್ದು ವಿಭಾಗದ ಮುಖ್ಯಸ್ಥರು ಹಾಗೂ ತುಂಬೆ ಸ್ಮರಣ ಸಂಚಿಕೆ ಗೌರವ ಸಂಪಾದಕರಾದ  ತರನ್ನುಂ ನಿಖತ್ ಎಸ್. ಮಾತನಾಡಿ,ಆನ್‌ಲೈನ್‌ನಲ್ಲಿ ಇದ್ದ ಕಾಲೇಜಿನ ವಾರ್ಷಿಕ ಸಂಚಿಕೆಯನ್ನು ಅಫ್ ಲೈನ್‌ಗೆ ತರಬೇಕೆಂದು ಪ್ರಯತ್ನಿ ಸಿದ ಫಲವಾಗಿ ಇಂದು ತುಂಬೆ ಸಂಚಿಕೆ ನಿಮಗಳ ಕೈ ಸೇರಿದೆ.ಇದು ವಿದ್ಯಾರ್ಥಿಗಳಿಗೊಸ್ಕರವೇ ಇರುವ ವೇದಿಕೆ ಯಾಗಿದೆ. ಮೊಬೈಲ್ ನಿಮ್ಮಲ್ಲಿರುವ ಪ್ರತಿಭೆಯನ್ನು ಕುಗ್ಗಿಸುತ್ತಿದ್ದು, ಅದನ್ನು ಬದಿಗಿಟ್ಟು, ನಿಮ್ಮಲ್ಲಿರುವ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುವಂತೆ ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತುಂಬೆ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾದ ಡಾ.ತಿಪ್ಪೇಸ್ವಾಮಿ, 2016 ರಿಂದ ತುಂಬೆ ಸ್ಮರಣ ಸಂಚಿಕೆ ಆರಂಭಗೊಂಡಿದ್ದು, ಕೋವಿಡ್‌ನಿಂದಾಗಿ ಅನ್‌ಲೈನ್‌ನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿತ್ತು.ಆದರೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ತರನ್ನುಂ ನಿಖತ್ ಎಸ್ ಅವರ ಒತ್ತಾಯ ಮತ್ತು ಬೆಂಬಲದ ಫಲವಾಗಿ ಇಂದು ಮುದ್ರಣಗೊಂಡು ಬಿಡುಗಡೆಯಾಗಿದೆ. ತುಂಬೆ ಸ್ಮರಣ ಸಂಚಿಕೆಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರುಗಳ ಸುಮಾರು 125ಕ್ಕೂ ಹೆಚ್ಚು ಲೇಖನಗಳು, ಕವಿತೆಗಳು ಮುದ್ರಣಗೊಂಡಿವೆ. ಕನ್ನಡ,ಇಂಗ್ಲೀಷ್, ಉರ್ದು ಸೇರಿದಂತೆ ಎಲ್ಲಾ ಭಾಷೆಗಳಿಗೂ ಮತ್ತು ಎಲ್ಲಾ ವಿಷಯಗಳಿಗೆ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣ ಸಂಸ್ಥೆಯ ಆಸ್ತಿಯಾಗಿರುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ ಟಿ.ಡಿ.ವಸಂತ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಪದ್ಮನಾಭ.ಜಿ.ಉಪನ್ಯಾಸಕರಾದ ರೇಣುಕಾ ಪ್ರಸನ್ನ, ಯೋಗೀಶ್, ಅನುಸೂಯ.ಕೆ.ವಿ. ಸೇರಿದಂತೆ ಸ್ಮರಣ ಸಂಚಿಕೆ ಸಂಪಾದಕ ಮಂಡಳಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: Tumkur Breaking: ಅಮಾನಿಕೆರೆ ಕೋಡಿ ನೀರಿನಿಂದ ದಿಬ್ಬೂರು ಜಲಾವೃತ