Thursday, 28th November 2024

ಪರಿಶಿಷ್ಟರ ಮೀಸಲಾತಿ ಹೆಚ್ಚಳದಿಂದ ಸಿದ್ದುಗೆ ನಿದ್ದೆಗೆಟ್ಟಿದೆ: ಶ್ರೀರಾಮುಲು ವ್ಯಂಗ್ಯ

ತುಮಕೂರು: ಮೀಸಲಾತಿ ಹೆಚ್ಚಳ ಮಾಡಿದ ನಂತರ ಸಿದ್ದರಾಮಯ್ಯ ಅವರಿಗೆ ನಿದ್ದೆ ಬರುತ್ತಿಲ್ಲ. ಸರ್ವಪಕ್ಷಗಳ ಸಭೆಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಸಹಮತ ವ್ಯಕ್ತಪಡಿಸಿ, ಹೊರಗೆ ಬಂದು ಅದರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಸಾರಿಗೆ ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನಕದಾಸರ ಹೆಸರಿನಲ್ಲಿ ರಾಜಕಾರಣ ಮಾಡಿ ಕೊಂಡು ಬಂದವರು, ತಾಕತ್ತಿದ್ದರೆ ಅಧಿಕಾರ ದಲ್ಲಿ ಇದ್ದಾಗ ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ಮಾಡಬೇಕಿತ್ತು ಎಂದು ಗುಡುಗಿದರು. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ನ. ೨೦ರಂದು ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡದವರ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ರಾಜ್ಯದಲ್ಲಿ ಪ್ರವಾಸ ಮಾಡಿ ಸಮಾ ವೇಶಕ್ಕೆ ಬರುವಂತೆ ಪಕ್ಷಾತೀತವಾಗಿ ವಾಲ್ಮೀಕಿ ಸಮುದಾಯದವರಿಗೆ ಆಹ್ವಾನ ನೀಡಲಾಗುತ್ತಿದೆ. ಬೇರೆ ಪಕ್ಷಗಳಲ್ಲಿ ಇರುವ ಸಮುದಾಯದವರು, ಆ ಪಕ್ಷ ತೊರೆದು ಹೊರ ಬರುವಂತೆ ಮನವಿ ಮಾಡಿದ್ದೇನೆ ಎಂದರು.

ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದನ್ನು ಸುಪ್ರೀಂ ಕೋರ್ಟ್ ನಲ್ಲಿ ಯಾರಾದರೂ ಪ್ರಶ್ನಿಸಿದರೂ ಸಮಸ್ಯೆ ಆಗದಂತೆ, ಪರಿಶಿಷ್ಟ ಜಾತಿ, ಪಂಗಡದವರಿಗೆ ಹೆಚ್ಚಳ ಮಾಡಿರುವ ಮೀಸಲಾತಿ ಜಾರಿಗೆ ಬರುವಂತೆ ರಾಜ್ಯ, ಕೇಂದ್ರದಲ್ಲಿ ಇರುವ ಬಿಜೆಪಿ ನೇತೃತ್ವದ ಸರ್ಕಾರಗಳು ನೋಡಿಕೊಳ್ಳಲಿವೆ. ಸಂವಿಧಾನ ತಿದ್ದುಪಡಿಯೂ ಸೇರಿದಂತೆ ರಾಜ್ಯ, ಕೇಂದ್ರ ಸರ್ಕಾರಗಳು ಅಗತ್ಯ ‘ಸಹಕಾರ’ ನೀಡಲಿವೆ. ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿದ್ದು, ರಾಜ್ಯಪಾಲರ ಒಪ್ಪಿಗೆಯೂ ಸಿಕ್ಕಿದೆ. ಸರ್ಕಾರದ ನಿರ್ಧಾರದಂತೆ ಜಾರಿ ಯಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾದಯಾತ್ರೆ ಒಂದು ರೀತಿಯಲ್ಲಿ ನಾಟಕೀಯವಾಗಿ ನಡೆಯಿತು. ಈ ನಾಟಕದಲ್ಲಿ ರಾಜ್ಯ ನಾಯಕರು ಪಾತ್ರಧಾರಿಗಳಾಗಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಈ ಪಾತ್ರಧಾರಿಗಳ ಮೂಲಕ ಮೀಸಲಾತಿ ಹೆಚ್ಚಳ ಮಾಡಿಸಲು ರಾಹುಲ್ ಗಾಂಧಿ ಪ್ರಯತ್ನ ಮಾಡಲಿಲ್ಲ. ಪರಿಶಿಷ್ಟರು, ಹಿಂದುಳಿದವರ ಹೆಸರು ಹೇಳಿಕೊಂಡು ಬಂದ ರಾಜ್ಯ ನಾಯಕರು, ಆ ಸಮುದಾಯಗಳಿಗೆ ಏನೂ ಮಾಡಲಿಲ್ಲ. ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ತಿರಸ್ಕಾರಕ್ಕೆ ಒಳಗಾದ ಪಕ್ಷ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಶಾಸಕರಾದ ಶಿವನಗೌಡ ನಾಯಕ, ಜ್ಯೋತಿಗಣೇಶ್, ಮಾಜಿ ಮೇಯರ್ ಕೃಷ್ಣಪ್ಪ, ಜಿಲ್ಲಾಧ್ಯಕ್ಷರಾದ ರವಿಹೆಬ್ಬಾಕ, ಬಿ.ಕೆ.ಮಂಜುನಾಥ್, ಪ್ರಭಾಕರ್, ಮಹೇಶ್, ಜಗದೀಶ್, ವೇದಮೂರ್ತಿ, ರಕ್ಷಿತ್ ವಿವಿಧ ಮೋರ್ಚಾದ ಪದಾಧಿಕಾರಿ ಗಳಿದ್ದರು.