ಕೊಲ್ಹಾರ: ಸನಾತನ ಪರಂಪರೆಯ ಭರತ ಹುಣ್ಣಿಮೆಯ ಪವಿತ್ರ ದಿನದಂದು ಜೋಳದ ತೆನೆ, ಕುಸುಬಿ ಗಿಡ, ಗೋದಿಯ ಹುಲ್ಲು ಸೇರಿದಂತೆ ಅಗಸಿ ಗಿಡಗಳನ್ನು ಮನೆಯ ಬಾಗಿಲಿಗೆ ಕಟ್ಟಿ ಪೂಜಿಸುತ್ತಿರುವ ಸಂಪ್ರದಾಯ ಅನಾದಿಕಾಲದಿಂದಲೂ ಅಚರಿಸಿಕೊಂಡು ಬಂದಂತಹ ಪವಿತ್ರ ಆಚರಣೆಯಾಗಿದೆ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹೇಳಿದರು
ಪಟ್ಟಣದ ತೆರಪಿ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ “ತಂಗಿ ತಂದ ಸೌಭಾಗ್ಯ” ಎಂಬ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಭಕ್ತಿಗೆ, ದೈವಿ ಶಕ್ತಿಗೆ ವಿಶೇಷ ಸ್ಥಾನವಿದೆ ಆಚರಿಸುವ ಪ್ರತಿಯೊಂದು ಕಾರ್ಯಕ್ಕೂ ವಿಶೇಷ ಅರ್ಥವಿರುತ್ತದೆ ಎಂದರು. ಪ್ರಸ್ತುತ ಆದುನಿಕ ಯುಗದಲ್ಲಿ ಟಿವಿ, ಸಿನಿಮಾ, ಮೊಬೈಲ್ ನಂತಹ ಆಧುನಿಕ ತಂತ್ರಜ್ಞಾನವಿದ್ದರು ಕೂಡ ಗ್ರಾಮೀಣ ಸೊಗಡಿನ ನಾಟಕ ವೀಕ್ಷಿಸಲು ಈ ಪರಿಯ ಜನ ಬರುವುದೆಂದರೆ ನಮ್ಮ ಗ್ರಾಮೀಣ ಕಲೆಗಳಲ್ಲಿ ಅಂತಹ ಸೆಳೆತ ಅಡಕವಾಗಿದೆ. ಜಾತ್ರಾ ಮಹೋತ್ಸವ ಪ್ರಯುಕ್ತ ಸೈಕ್ಲಿಂಗ್ ಸ್ಪರ್ಧೆ, ಗ್ರಾಮೀಣ ಸೊಗಡಿನ ಟಗರಿನ ಕಾಳಗ, ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿರುವುದು ಗ್ರಾಮೀಣ ಸೊಗಡಿನ ಕಲೆಗೆ ಬೆಲೆ ಕೊಟ್ಟಂತಾಗಿದೆ. ಯಲ್ಲಮ್ಮ ದೇವಿಯು ನಾಡಿಗೆ ಒಳಿತನ್ನು ಮಾಡಲಿ ಎಂದು ಅವರು ಈ ಸಂದರ್ಭದಲ್ಲಿ ಹಾರೈಸಿದರು.
ವೇದಿಕೆಯ ಮೇಲೆ ತೆರಪಿ ಯಲ್ಲಮ್ಮ ದೇವಿ ಅರ್ಚಕರಾದ ಸಂಗಪ್ಪ ಬಾಟಿ, ಪ್ರಮುಖರಾದ ಹಣಮಂತ ಬಾಟಿ, ಬಸವರಾಜ ಸಿದ್ದಗೊಂಡ, ರಾಮಣ್ಣ ಬಾಟಿ, ರಮೇಶ ಮಮದಾಪೂರ, ಕಲ್ಲಪ್ಪ ಸೊನ್ನದ, ಪ.ಪಂ ಸದಸ್ಯರಾದ ಬಾಬು ಭಜಂತ್ರಿ, ಅಪ್ಪಾಸಿ ಮಟ್ಯಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.