ತುಮಕೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಅಳಲು ತೋಡಿಕೊಳ್ಳಲು ಬಂದ ಪೊಲೀಸ್ ಹುದ್ದೆ ಆಕಾಂಕ್ಷಿಗೆ ಗೃಹ ಸಚಿವರ ವೇದಿಕೆ ಮುಂಭಾಗ ಸಾರ್ವಜನಿಕರ ಎದುರೇ ತುಮಕೂರು ನಗರ ಡಿವೈಎಸ್ಪಿ ಶ್ರೀನಿವಾಸ್ ಕಪಾಳಮೋಕ್ಷ ಮಾಡಿ ದರ್ಪ ಮೆರೆದಿದ್ದಾರೆ.
ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಬೇಕೆಂದು ಕೋರಿ ಉತ್ತರ ಕರ್ನಾಟಕ ಮೂಲದ ನೂರಾರು ಆಕಾಂಕ್ಷಿಗಳು ನಗರದ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಗೃಹ ಸಚಿವರನ್ನು ಭೇಟಿಯಾದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪೊಲೀಸ್ ಹುದ್ದೆ ಆಕಾಂಕ್ಷಿಗಳು ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಬೇಕೆಂದು ಕಾಲಿಗೆ ಬಿದ್ದರು.
ಈ ಕುರಿತು ಕಳೆದ ೨ ವರ್ಷಗಳಿಂದ ಶಾಸಕರು, ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ ಈವರೆಗೆ ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಿಸಿಲ್ಲ. ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಕಣ್ಣೀರಿಟ್ಟರು.
ಗೃಹ ಸಚಿವರ ಎದುರು ತಮ್ಮ ಅಳಲು ತೊಡಿಕೊಳ್ಳಲು ಬಂದ ಪೊಲೀಸ್ ಹುದ್ದೆಯ ಆಕಾಂಕ್ಷಿಯೊಬ್ಬರಿಗೆ ತುಮಕೂರು ಡಿವೈಎಸ್‌ಪಿ ಶ್ರೀನಿವಾಸ್ ಕಪಾಳ ಮೋಕ್ಷ ಮಾಡಿದರು. ಗೃಹ ಸಚಿವರನ್ನು ಭೇಟಿಯಾಗಲು ಆಕಾಂಕ್ಷಿಗಳು ಯತ್ನಿಸುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದರಿಂದ ಆಕಾಂಕ್ಷಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸ್ಥಳದಲ್ಲಿದ್ದ ಡಿವೈಎಸ್‌ಪಿ ಆಕಾಂಕ್ಷಿಯೊಬ್ಬರಿಗೆ ಕಪಾಳಕ್ಕೆ ಹೊಡೆದು ದೂರ ತಳ್ಳಿದ್ದಾರೆ.
ಗೃಹ ಸಚಿವರಿದ್ದ ವೇದಿಕೆ ಬಳಿಯೇ ಈ ಘಟನೆ ನಡೆದಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.