ತುಮಕೂರು: ಸಾಮಾಜಿಕ ಜಾಲತಾಣ ಅಕ್ರಮಗಳ ವೇದಿಕೆಯಾಗಿ ಬದಲಾಗುತ್ತಿರುವುದು ಆತಂಕ ಮೂಡಿಸಿದೆ.
ಫೇಸ್ ಬುಕ್ ಮೂಲಕ ಪರಿಚಿತನಾದ ಅಪರಿಚಿತ ವ್ಯಕ್ತಿ ತೋರಿದ ಗಿಫ್ಟ್ ಆಸೆಗೆ ಇಲ್ಲಿನ ಶಾಂತಿನಗರದ ಗೃಹಿಣಿ 10 ಲಕ್ಷಕ್ಕೆ ಪಂಗನಾಮ ಹಾಕಿಸಿ ಕೊಂಡಿದ್ದು, ಸೈಬರ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಫೇಸ್ ಬುಕ್ ನಲ್ಲಿ ಪರಿಚಿತವಾದ ಅಪರಿಚಿತ ವ್ಯಕ್ತಿ ಕ್ರಮೇಣ ಮಹಿಳೆಯ ಮೊಬೈಲ್ ನಂಬರ್ ಪಡೆದು ಸ್ವಲ್ಪ ದಿನದ ನಂತರ ದುಬಾರಿ ಗಿಫ್ಟ್ ನೀಡುವ ಆಸೆ ತೋರಿಸಿ ಗಿಫ್ಟ್ ಕೋರಿಯರ್ ಮಾಡಿರುವುದಾಗಿ ಮುದ್ರಣ ಪ್ರತಿಯನ್ನು ಕಳುಹಿಸಿದ್ದಾನೆ.
ಗಿಫ್ಟ್ ಪಡೆದುಕೊಳ್ಳಲು ಕಸ್ಟಮ್ ಅಧಿಕಾರಿಗಳೊಂದಿಗೆ ಸಂಪರ್ಕ ಪಡೆಯಲು ಹೇಳಿ ದ್ದಾನೆ. ಅದರಂತೆ ಮಹಿಳೆಯ ಮೊಬೈಲ್ ನಂಬರ್ ಗೆ ಕರೆ ಮಾಡಿ ನಿಮಗೆ ಬಂದಿರುವ ಗಿಫ್ಟ್ ಪಡೆಯಲು ಕಸ್ಟಮ್ ಹಣವನ್ನು ಕಟ್ಟುವಂತೆ ಹೇಳಿದ್ದಾರೆ. ದುಬಾರಿ ಗಿಫ್ಟ್ ಆಸೆಗೆ ಮರುಳಾದ ಮಹಿಳೆ ಹಂತಹಂತವಾಗಿ ಒಟ್ಟು 10,99,900 ರುಪಾಯಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಕಿದ್ದಾರೆ.
10 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಾವತಿಸಿದರೂ ಸಹ ಅಪರಿಚಿತನ ದುಬಾರಿ ಗಿಫ್ಟ್ ಬಾರದೆ ಇದ್ದಾಗ ಅನುಮಾನಗೊಂಡ ಶಾಂತಿನಗರದ ಮಹಿಳೆ ಸೈಬರ್ ಠಾಣೆಗೆ ದೂರು ನೀಡಿದ್ದಾಳೆ. ಜಾಲತಾಣದಲ್ಲಿ ಅಪರಿಚಿತರೊಂದಿಗೆ ಮೊಬೈಲ್ ನಂಬರ್ ಹಂಚಿಕೊಳ್ಳಬೇಡಿ. ಬಳಸುವಾಗ ಎಚ್ಚರಿಕೆಯಿರಲಿ ಎಂಬುದಾಗಿ ಪೊಲೀಸರು ಸಾಕಷ್ಟು ಅರಿವು ಮೂಡಿಸುತ್ತಿದ್ದರೂ ಜಾಲತಾಣ ದಿಂದ ಮೋಸಕ್ಕೊಳಗಾಗುತ್ತಿರುವ ವಿದ್ಯಾವಂತರ ಸಂಖ್ಯೆ ಅಧಿಕವಾಗುತ್ತಿರುವುದು ಆತಂಕದ ವಿಚಾರವಾಗಿದೆ.