800ಕ್ಕೂ ಹೆಚ್ಚುಬೆಂಬಲಿಗರು ರಾಜೀನಾಮೆ
ರಂಗನಾಥ ಕೆ.ಮರಡಿ
ತುಮಕೂರು : ನಾಲ್ಕು ದಶಕಗಳಿಂದ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಬಿಜೆಪಿ ಪಕ್ಷ ಕಟ್ಟುವಲ್ಲಿ ಹಗಲಿರುಳು ಶ್ರಮಿಸಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ನೋವಿ ನಿಂದ ಗುರುವಾರ ರಾಜೀನಾಮೆ ನೀಡಿದರು.
ರಾಜೀನಾಮೆ ಅಂಗೀಕಾರವಾದ ನಂತರ ಜೆಡಿಎಸ್ ಪಾಳಯ ಸೇರಲಿದ್ದು, ನಗರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಬೆಂಬಲಿಗರು ಜೆಡಿಎಸ್ ಗೆ ಬರುವುದನ್ನು ಎದುರು ನೋಡುತ್ತಿದ್ದಾರೆ.
ಈ ವೇಳೆ ಮಾತನಾಡಿದ ಸೊಗಡು ಶಿವಣ್ಣ, ಜನಸಂಘದ ಕಾಲದಿಂದಲೂ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿ ದ್ದೇನೆ. ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದು ೨೦೧೮ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಮಾತಿಗೆ ಮನ್ನಣೆ ನೀಡಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುತ್ತದೆ ಎಂಬ ಭರವಸೆ ಹುಸಿಯಾಗಿದೆ ಎಂದರು.
ಜೋಳಿಗೆ ಹಿಡಿದು ಮತದಾರರ ಬಳಿ ಹೋಗುತ್ತಿದೆ. ಆದರೆ ಟಿಕೆಟ್ ನೀಡದೆ ಮೋಸ ಮಾಡಲಾಗಿದೆ. ನಾನು ಮುಂದಿಟ್ಟ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದಿಡುವ ಪ್ರಮೇಯವೇ ಇಲ್ಲ ಎಂದರು.
800ಕ್ಕೂ ಅಧಿಕ ಬೆಂಬಲಿಗರು ರಾಜೀನಾಮೆ
ಈ ಬಾರಿಯ ಕದನದಲ್ಲಿ ಸೊಗಡು ಶಿವಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡದೆ ಮೋಸ ಮಾಡಿದೆ ಎಂದು ಸುಮಾರು 800ಕ್ಕೂ ಅಧಿಕ ಸೊಗಡು ಶಿವಣ್ಣ ಅವರ ಬೆಂಬಲಿಗರು ವಿವಿಧ ಸ್ಥಾನಗಳಿಗೆ ರಾಜೀನಾಮೆ ನೀಡಿ ಕಮಲ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ.
*
ನಾವು ಬಿಜೆಪಿಗೆ ಸೇರಿಸಿಕೊಂಡವರು ನಮ್ಮನ್ನು ತುಳಿಯಲು ಹಗಲುಗನಸು ಕಾಣುತ್ತಿದ್ದಾರೆ. ಸಂಸದ ಬಸವರಾಜು ಚಿ.ನಾ.ಹಳ್ಳಿಯಲ್ಲಿ ಸಚಿವ ಮಾಧು ಸ್ವಾಮಿ ಸೋಲಿಸಲು ಕಿರಣ್ ಕುಮಾರ್ ಅವರನ್ನು ಎತ್ತಿಕಟ್ಟಿದ್ದಾರೆ. ತುಮಕೂರು ಗ್ರಾಮಾಂತರದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಸಚಿವರಾಗಲು ನನಗೆ ಟಿಕೆಟ್ ತಪ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ನೀಡಲಾಗುವುದು.
ಮಾಜಿ ಸಚಿವ ಸೊಗಡು ಶಿವಣ್ಣ.
*
ಮಾಜಿ ಸಚಿವ ಶಿವಣ್ಣ ಅವರು ಜೆಡಿಎಸ್ ಪಕ್ಷಕ್ಕೆ ಬಂದರೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ. ಜಿಲ್ಲೆಯಲ್ಲಿ ದಳಕ್ಕೆ ಆನೆ ಬಲ ಬರುತ್ತದೆ. ಮಾಜಿ ಸಚಿವ ಚೆನ್ನಿಗಪ್ಪ ಅವರು ಶಿವಣ್ಣ ಅವರನ್ನು ಜೆಡಿಎಸ್ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡಿದ್ದರು ಆದರೆ ಶಿವಣ್ಣ ಬಂದಿರಲಿಲ್ಲ.
ಆಂಜಿನಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ.