ತುಮಕೂರು: ತಾಲೂಕಿನ ಬೆಳ್ಳಾವಿ ಹೋಬಳಿ ಮುದಿಗೆರೆ ಗ್ರಾಮದಲ್ಲಿ ಆಗಸ್ಟ್ 1ರಂದು ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ ದಲ್ಲಿ ಶ್ರೀ ಭ್ರಮರಾಂಬ ಸಮೇತ ಸೋಮೇಶ್ವರಸ್ವಾಮಿಯವರ ಪುನರ್ ಪ್ರತಿಷ್ಠಾಪನೆ ಮತ್ತು ವಿಮಾನ ಗೋಪುರ ಕಲಶ ಸ್ಥಾಪನೆ ಹಾಗೂ ಕಲ್ಯಾಣೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಸೋಮೇಶ್ವರ ಸೇವಾ ಸಮಿತಿ ಅಧ್ಯಕ್ಷ ಕುಮಾರ್ ತಿಳಿಸಿದ್ದಾರೆ.
ಶ್ರೀ ಸ್ವಾಮಿಯ ಪ್ರತಿಷ್ಠಾಪನೆ ಅಂಗವಾಗಿ ಜುಲೈ 31ರ ಭಾನುವಾರದಿಂದಲೇ ಹೋಮ, ಪಿಂಡಿಕಾ ಪೂಜೆ ಸೇರಿದಂತೆ ವಿಶೇಷ ಪೂಜಾ ಸೇವೆಗಳು ನಡೆಯಲಿವೆ. ಮರುದಿನ ಆಗಸ್ಟ್ 1ರ ಸೋಮವಾರ ಮಧ್ಯಾಹ್ನ 12 ರಿಂದ 12.30 ಗಂಟೆಯೊಳಗಿನ ಶುಭ ಅಭಿಜಿತ್ ಮುಹೂರ್ತದಲ್ಲಿ ಕಲಶ ಪ್ರತಿಷ್ಠಾಪನೆ ಜರುಗಲಿದೆ.
ನಂತರ 12.30 ರಿಂದ ಸಂಜೆ 4.30ರವರೆಗೆ ಶ್ರೀ ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ದಿವ್ಯಸಾನಿಧ್ಯದಲ್ಲಿ ನಡೆಯಲಿರುವ ಧಾರ್ಮಿಕ ಸಮಾರಂಭ ವನ್ನು ಕೊರಟಗೆರೆ ತಾಲೂಕು ಶ್ರೀ ಕ್ಷೇತ್ರ ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ ಉದ್ಘಾಟಿಸಲಿದ್ದಾರೆ.
ಬೆಳ್ಳಾವಿ ಶ್ರೀ ಕಾರದೇಶ್ವರ ಮಠದ ಶ್ರೀ ಕಾರದ ವೀರಬಸವಮಹಾಸ್ವಾಮಿಗಳು ಅಧ್ಯಕ್ಷತೆವಹಿಸಲಿದ್ದಾರೆ. ಶಿರಾ ತಾಲೂಕು ಸುಕ್ಷೇತ್ರ ಶ್ರೀ ವಾಲ್ಮೀಕಿ ಮಹಾಸಂಸ್ಥಾನ ಪೀಠದ ಪೀಠಾಧ್ಯಕ್ಷರಾದ ಶ್ರೀ ಸಂಜಯ್ ಕುಮಾರ ಮಹಾಸ್ವಾಮಿಗಳು ನೇತೃತ್ವ ವಹಿಸಿಕೊಳ್ಳ ಲಿದ್ದಾರೆ.
ತಿಪಟೂರು ತಾಲೂಕು ಆಲ್ಬೂರು ಅಣ್ಣಪ್ಪನಹಳ್ಳಿ ಸುಕ್ಷೇತ್ರ ಶ್ರೀ ಶನೇಶ್ವರ ಮಠದ ಶ್ರೀ ಸೋಮಶೇಖರ ಸ್ವಾಮೀಜಿ, ಮತ್ತಿತರ ಜನಪ್ರತಿನಿಧಿಗಳು, ಅಧಿಕಾರಿಗಳು, ಭಕ್ತಸಮೂಹ ಉಪಸ್ಥಿತರಿರುತ್ತಾರೆ.
ಸೋಮವಾರ ಸಂಜೆ 4.30 ಗಂಟೆಗೆ ನಡೆಯಲಿರುವ ಶ್ರೀ ಭ್ರಮರಾಂಬ ಸಹಿತ ಶ್ರೀ ಸೋಮೇಶ್ವರ ಸ್ವಾಮಿಯವರ ಕಲ್ಯಾಣೋತ್ಸವದ ಪ್ರಯುಕ್ತ ರಾಜಬೀದಿಯಲ್ಲಿ ಲಿಂಗದ ವೀರರ ಕುಣಿತ, ವೀರಗಾಸೆ, ಸ್ವಾಮಿಯ ಉತ್ಸವ ಜರುಗಲಿದೆ. ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಅನ್ನದಾಸೋಹವನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.