Thursday, 12th December 2024

MLA Pradeep Eshwar: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಿ ಬಡಮಕ್ಕಳ ಭವಿಷ್ಯಕ್ಕೆ ನಾಂದಿ ಯಾಗೋಣ : ಶಾಸಕ ಪ್ರದೀಪ್ ಈಶ್ವರ್ ಕರೆ

ನ.4ರಿಂದ ಡಿಸೆಂಬರ್‌ವರೆಗೆ ಪ್ರತಿದಿನ ಸರಣಿ ಪರೀಕ್ಷೆ ನಡೆಯಲಿದ್ದು ಎಸ್‌ಎಸ್‌ಎಲ್‌ಸಿ ಬೋರ್ಡ್ ಮಾದರಿನ ಮೌಲ್ಯಮಾಪನ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿರುವ 18 ಸರಕಾರಿ 08 ಅನುದಾನಿತ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ 4 ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಫಲಿತಾಂಶ ಸುಧಾರಣೆ ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಮಾರ್ಗದರ್ಶನದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ನಗರಹೊರವಲಯ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೇತೃತ್ವದಲ್ಲಿ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ವೃದ್ಧಿಗಾಗಿ ಏರ್ಪಡಿಸಿದ್ದ ಪ್ರೌಢಶಾಲಾ ಮುಖ್ಯಶಿಕ್ಷಕರ ಶೈಕ್ಷಣಿಕ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾನು ಸರಕಾರಿ ಶಾಲಾ ಕಾಲೇಜುಗಳಲ್ಲಿಯೇ ಶಿಕ್ಷಣ ಪಡೆದ ಕಾರಣ ಈ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಸಂಪೂರ್ಣ ಮಾಹಿತಿ ನನಗಿದೆ. ಇಲ್ಲಿ ಓದಲು ಬರುವ ಬಡ ದಲಿತರ ಹಿಂದುಳಿದ ಸಮುದಾಯದ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸು ಮಾಡಿಕೊಂಡರೆ ಏನಾದರೂ ಒಂದು ಉದ್ಯೋಗ ಮಾಡಲು ಅವಕಾಶ ದೊರೆಯಲಿದೆ ಎಂಬ ಕನಸಿನೊಂದಿಗೆ ಶಿಕ್ಷಕರ ನೆರವಿನೊಂದಿಗೆ ಫಲಿತಾಂಶ ಸುಧಾರಣೆಗೆ ಮುಂದಾಗಿದ್ದೇನೆ.ಇದಕ್ಕೂ ಜಿಲ್ಲೆಯ ಫಲಿತಾಂಶಕ್ಕೂ ಸಂಬ0ಧವಿಲ್ಲ ಎಂದರು.

ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ 4 ಸಾವಿರ ವಿದ್ಯಾರ್ಥಿಗಳಿಗೆ ಎರಡು ತಿಂಗಳ ಕಾಲ ವಿಶೇಷ ತರಬೇತಿ ನೀಡುವುದಲ್ಲದೆ, ಸರಣಿ ಪರೀಕ್ಷೆಗಳ ಮೂಲಕ ಗುಣಮಟ್ಟದ ಫಲಿತಾಂಶ ತರುವ ಯೋಜನೆ ರೂಪಿಸಲಾಗಿದೆ.ಇದಕ್ಕಾಗಿ 48 ಸರಣಿ ಟೆಸ್ಟ್ಗಳ ಪ್ಯಾಕ್ ರೂಪಿಸಲಾಗಿದ್ದು ಈ ಯೋಜನೆ ನ.4ರಿಂದ ಜಾರಿಗೆ ಬರಲಿದ್ದು ಡಿಸೆಂಬರ್‌ವರೆಗೆ ಇರಲಿದೆ ಎಂದರು.

ಕಳೆದ ವರ್ಷ ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ಸೂಪರ್ ಸಿಕ್ಸ್ಟಿ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ವಸತಿ ಸಹಿತ ನುರಿತ ಶಿಕ್ಷಕರಿಂದ ತರಬೇತಿ ನೀಡಿದ ಪರಿಣಾಮ ಸಾಕಷ್ಟು ಸರಕಾರಿ ಶಾಲೆ ಮಕ್ಕಳ ಫಲಿತಾಂಶ ಸುಧಾರಣೆ ಕಂಡಿದೆ.ಆದರೂ ಈ ಬಗ್ಗೆ ಟೀಕೆಗಳು ಬಂದವು. ಆ ಬಗ್ಗೆ ನಾನು ತಲೆಕೆಡಿಕೊಳ್ಳುವುದಿಲ್ಲ.ಬಡಮಕ್ಕಳಿಗೆ  ಅನುಕೂಲ ಆದರೆ ಅಷ್ಟೇ ಸಾಕು ಎಂದರು.

ಮಾಸ್ಟರ್ ಪ್ಲಾನ್
ಚಿಕ್ಕಬಳ್ಳಾಪುರ ವಿಧಾನಸಭಾ ವ್ಯಾಪ್ತಿಗೆ ಮಾತ್ರ ಅನ್ವಯವಾಗುವಂತೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಅತ್ಯತ್ತಮ ಫಲಿತಾಂಶ ತರಿಸುವ ದೃಷ್ಟಿಯಿಂದ ಮಾಸ್ಟರ್ ಪ್ಲಾನ್ ರೂಪಿಸಿರುವ ಶಾಸಕ ಪ್ರದೀಪ್ ಈಶ್ವರ್ ಪ್ರತಿದಿನ ಟೆಸ್ಟ್ ಬರೆಸಲು ತೀರ್ಮಾನ ಮಾಡಿದ್ದಾರೆ. ನವೆಂಬರ್ 4 ರಿಂದ ಪ್ರತಿ ದಿನ ನಡೆಯುವ 48 ಟೆಸ್ಟ್ಗಳು ಇರಲಿದ್ದು ಎಂಎಲ್‌ಎ ಪ್ರದೀಪ್ ಈಶ್ವರ್ ಎಸ್‌ಎಸ್‌ಎಲ್‌ಸಿ ಸರಣಿ ಟೆಸ್ಟ್ 2023-24 ಎಂಬ ಹೆಸರಿನಲ್ಲಿ ಪ್ರಶ್ನೆ ಪತ್ರಿಕೆ ತಯಾರಾ ಗುತ್ತಿದ್ದು ಈ ಸರಣಿ ಟೆಸ್ಟ್ ನಿಂದ ಮಕ್ಕಳು ಪ್ರತಿದಿನ ತಾವು ಮರೆತಿರುವ ವಿಷಯಗಳನ್ನು ಪುನರ್ಮನನ ಮಾಡಿ ಕೊಂಡು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು  ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ವಿಧಾನಸಭಾ ವ್ಯಾಪ್ತಿಯ ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಮಂಚೇನಹಳ್ಳಿ ತಾಲ್ಲೂಕುಗಳಿಗೆ ಅನ್ವಯವಾಗುವಂತೆ ತಯಾರಾಗುವ ಈ ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕೆ ಅಂದಾಜು 16 ಲಕ್ಷ ರೂಗಳವರೆಗೂ ಖರ್ಚಾಗಬಹುದು.ಈ ಅನುಕೂಲು ಕ್ಷೇತ್ರದ 24 ಪ್ರೌಢಶಾಲೆಗಳ ಸುಮಾರು 4000 ಮಕ್ಕಳಿಗೆ ಸಿಗುತ್ತಿದ್ದು, ಪರೀಕ್ಷೆ ನಡೆಯುವ ಎಲ್ಲಾ ಶಾಲೆಗಳಿಗೂ ಸಿ.ಸಿ ಕ್ಯಾಮೆರ ಅಳವಡಿಕೆ ಮಾಡಲಾಗುವುದು ಎಂದು ಹೇಳಿದರು.

ಶೈಕ್ಷಣಿಕ ಅಭಿವೃದ್ಧಿ ಸಮಾಲೋಚನಾ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ,ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಭಾಸ್ಕರ್, ಡಿಡಿಪಿಐ ಬೈಲಾಂಜಿನಪ್ಪ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ್ ,ವೆಂಕಟೇಶಪ್ಪ,ಮಾಸ್ಟರ್ ವಿಷನ್ ಶಾಲೆಯ ಮುಖ್ಯಸ್ಥ ನಾಗಭೂಷಣ್ ಮತ್ತಿತರರು ಇದ್ದರು.