ಬೆಂಗಳೂರು: ಭವಿಷ್ಯದ ಸ್ವಚ್ಛತೆ ಹಾಗೂ ಹಸಿರುಮಯ ನಗರಕ್ಕಾಗಿ ಪ್ರಕ್ರಿಯಾ ಮಲ್ಟಿಸ್ಪೆಷಾಲಿಟಿ ಹಾಗೂ ಅದ್ವಿಕಾ ಕೇರ್ ಫೌಂಡೇಶನ್ ಸಹಯೋಗದಲ್ಲಿ ನಗರದ ದಾಸರಹಳ್ಳಿಯಲ್ಲಿ ʼಸ್ವಚ್ಛ ದಾಸರಹಳ್ಳಿ ಅಭಿಯಾನʼ (Swacha Dasarahalli) ವನ್ನು ಭಾನುವಾರ ಕೈಗೊಳ್ಳಲಾಗಿತ್ತು.
ದಾಸರಹಳ್ಳಿ ಕ್ಷೇತ್ರವನ್ನು ಸ್ವಚ್ಛವಾಗಿರಿಸಲು ಪ್ರಗತಿ ಆಸ್ಪತ್ರೆ ಮತ್ತು ಅದ್ವಿಕಾ ಕೇರ್ ಫೌಂಡೇಶನ್ ವತಿಯಿಂದ ಸ್ವಚ್ಛ ದಾಸರಹಳ್ಳಿ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಪ್ರಕ್ರಿಯಾ ಆಸ್ಪತ್ರೆ ಸಿಇಒ ಶ್ರೀನಿವಾಸ್ ಚಿರಕೂರಿ ತಿಳಿಸಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗಿಯಾಗಿ ಬೆಂಬಲ ಸೂಚಿಸಿದರು. ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಈ ವೇಳೆ ಭಿತ್ತಿ ಫಲಕಗಳನ್ನು ಹಿಡಿದು ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಸ್ವಚ್ಛವಾದ ದಾಸರಹಳ್ಳಿ ನಿರ್ಮಾಣದ ಗುರಿಯನ್ನಿಟ್ಟುಕೊಂಡು ಆಯೋಜಿಸಿದ್ದ ಸ್ವಚ್ಛ ದಾಸರಹಳ್ಳಿ ಅಭಿಯಾನದಲ್ಲಿ ದಾಸರಹಳ್ಳಿ ಶಾಸಕರಾದ ಎಸ್. ಮುನಿರಾಜು, ಪ್ರಕ್ರಿಯಾ ಆಸ್ಪತ್ರೆ ಸಿಇಒ ಶ್ರೀನಿವಾಸ್ ಚಿರಕೂರಿ, ಅದ್ವಿಕಾ ಕೇರ್ ಫೌಂಡೇಶನ್‌ನ ರಾಜಶ್ರೀ ವಾರಿಯರ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು.