Thursday, 28th November 2024

Trust Well Hospital: ತರುಣನಿಗೆ ಯಶಸ್ವಿಯಾಗಿ ಅಸ್ಥಿ ಮಜ್ಜೆ ಕಸಿ (ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್) ನಡೆಸಿ ಬದುಕು ನೀಡಿದ ಟ್ರಸ್ಟ್‌ ವೆಲ್ ಹಾಸ್ಪಿಟಲ್

ಬೆಂಗಳೂರು: ರಘು (ಹೆಸರು ಬದಲಾಯಿಸಲಾಗಿದೆ) ಎಂಬ ತರುಣನಿಗೆ ಯಶಸ್ವಿಯಾಗಿ ಅಸ್ಥಿಮಜ್ಜೆಯ ಕಸಿ (ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್) ನಡೆಸಿರುವ ಟ್ರಸ್ಟ್‌ ವೆಲ್ ಹಾಸ್ಪಿಟಲ್ ಆ ತರುಣನಿಗೆ ಹೊಸ ಬದುಕು ನೀಡಿದೆ. ಈ ಕುರಿತು ಆಸ್ಪತ್ರೆಯು ತಿಳಿಸಿದೆ.

ವೈದ್ಯರಾದ ಡಾ. ಸಚಿನ್ ಜಾಧವ್ ಎಂಬಿಬಿಎಸ್, ಎಂಡಿ, ಡಿಎಂ ಕ್ಲಿನಿಕಲ್ ಹೆಮಟಾಲಜಿ ಮತ್ತು ಡಾ. ನಿಶಿತ್ ಎಂಬಿಬಿಎಸ್, ಎಂಡಿ, ಕ್ಲಿನಿಕಲ್ ಲೀಡ್ ಹೆಮಟಾಲಜಿ ಮತ್ತು ಬಿಎಂಟಿ ಹಾಗೂ ಹೆಮಟೊಲಾಜಿಕಲ್ ಕಾಯಿಲೆಗಳಿಗೆ ಅತ್ಯಾಧುನಿಕ ಚಿಕಿತ್ಸೆ ನೀಡಲು ಮೀಸಲಾಗಿರುವ ವಿಶೇಷ ವೈದ್ಯಕೀಯ ವೃತ್ತಿಪರರ ತಂಡವು ಈ ಮೂಳೆ ಮಜ್ಜೆ ಕಸಿಯನ್ನು ಯಶಸ್ವಿಯಾಗಿ ನಡೆಸಿತು.

ಈ ಕುರಿತು ವೈದ್ಯ ಡಾ. ನಿಶಿತ್ ಮಾತನಾಡಿ, “ಇದೊಂದು ಸವಾಲಿನ ಪ್ರಕ್ರಿಯೆಯಾಗಿತ್ತು. ನಿಖರವಾಗಿ ಮತ್ತು ಸೂಕ್ತವಾಗಿ ನಿರ್ವಹಣೆ ಮಾಡುವುದು ಅವಶ್ಯವಾಗಿತ್ತು. ತಂಡದ ಶ್ರಮದಿಂದ ಯಶಸ್ವಿಯಾಗಿ ಮೂಳೆ ಮಜ್ಜೆ ಕಸಿ ನಡೆಸಲಾಯಿತು ಮತ್ತು ರೋಗಿಯು ಇನ್ನು ಮುಂದೆ ಸಾಮಾನ್ಯ ಜೀವನವನ್ನು ನಡೆಸಬಹುದಾಗಿದೆ. ಈ ಪ್ರಕ್ರಿಯೆಯಲ್ಲಿ ರೋಗಿಯು ತೋರಿದ ಧೈರ್ಯ ಅಸಾಧಾರಣವಾದುದಾಗಿದೆ. ನಾವು ಪ್ರತೀ ಕಸಿ ಪ್ರಕ್ರಿಯೆಯನ್ನು ನಡೆಸುವ ಮೂಲಕ ರೋಗಿಗಳ ಜೀವನದ ಗುಣಮಟ್ಟ ಉತ್ತಮಗೊಳಿಸಲು ಆಶಿಸುತ್ತೇವೆ” ಎಂದು ಹೇಳಿದರು.

ಕಚೇರಿ ಎಕ್ಸಿಕ್ಯೂಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಘು ಎಂಬ ತರುಣನಿಗೆ ಎಕ್ಸ್‌ ಟ್ರಾಮೆಡಲ್ಲರಿ ಬಿ-ಸೆಲ್ ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ (ಎಎಲ್‌ಎಲ್) ಪತ್ತೆಯಾಗಿತ್ತು. ಇದು ಒಂದು ರೀತಿಯ ರಕ್ತದ ಕ್ಯಾನ್ಸರ್ ಆಗಿದೆ. 2019ರಲ್ಲಿ ಅವರಿಗೆ ಬಿ-ಸೆಲ್ ಆಲ್ ಪತ್ತೆಯಾಗಿತ್ತು, ಆಗ ಅವರು ಕೀಮೋಥೆರಪಿಯೊಂದಿಗೆ ಚಿಕಿತ್ಸೆ ಪಡೆದಿದ್ದರು. ದುರದೃಷ್ಟವಶಾತ್ 2024ರ ಮಾರ್ಚ್ ನಲ್ಲಿ ಅವರಿ ಕ್ಯಾನ್ಸರ್ ಮತ್ತೆ ಮರುಕಳಿಸಿತ್ತು. ಈ ಸಲ ಅವರಿಗೆ ಎರಡನೇ ಸುತ್ತಿನ ಕೀಮೋಥೆರಪಿ ನೀಡಲಾಯಿತು. ಅದರ ಜೊತೆಗೆ ರೋಗದಿಂದ ಗುಣಮುಕ್ತರಾಗಲು ಮೂಳೆ ಮಜ್ಜೆಯ ಕಸಿ ಮಾಡಲು ನಿರ್ಧರಿಸಲಾಯಿತು. ಅವರ ಸಹೋದರಿ ಮೂಳೆ ಮಜ್ಜೆ ದಾನಿಯಾಗಲು ಒಪ್ಪಿಕೊಂಡರು. 2024ರ ಅಕ್ಟೋಬರ್ 19ರಂದು ಹ್ಯಾಪ್ಲೋಡೆಂಟಿಕಲ್ ಅಲೋಜೆನಿಕ್ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಅನ್ನು ಯಶಸ್ವಿಯಾಗಿ ನಡೆಸಲಾಯಿತು. ಒಟ್ಟು 28 ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರಘು ಅವರು ಮೂಳೆ ಮಜ್ಜೆ ಕಸಿ ಬಳಿಕವೂ ಆಸ್ಪತ್ರೆಯ ಕಣ್ಗಾವಲಿನಲ್ಲಿ ಇದ್ದರು. ಅವರು ಗುಣಮುಖರಾದ ಬಳಿಕ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಗಿದ್ದು, ಪ್ರಸ್ತುತ ಫಾಲೋ ಅಪ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೂಕ್ತ ಅಸ್ಥಿ ಮಜ್ಜೆ ದಾನಿ
ಅಸ್ಥಿ ಮಜ್ಜೆ ಕಸಿಗೆ ಸೂಕ್ತ ದಾನಿ ಸಿಗುವುದು ಮುಖ್ಯವಾಗಿತ್ತು. ಸಹೋದರಿಯೇ ದಾನ ಮಾಡಲು ಒಪ್ಪಿಕೊಂಡಿದ್ದರಿಂದ ಆ ಸವಾಲಿಗೆ ಪರಿಹಾರ ಸಿಕ್ಕಿತು. ವೈದ್ಯಕೀಯ ತಂಡವು ಸೂಕ್ತ ವ್ಯವಸ್ಥೆ, ಧನಸಹಾಯ ವ್ಯವಸ್ಥೆ ಮಾಡಿಕೊಂಡು ಅತ್ಯುತ್ತಮ ಚಿಕಿತ್ಸೆ ನೀಡಲು ದಣಿಯವರಿಯದೆ ಕಾರ್ಯ ನಿರ್ವಹಿಸಿದೆ. ಆ ಮೂಲಕ ಅತ್ಯುನ್ನತ ಗುಣಮಟ್ಟದ ಸುರಕ್ಷತೆ ಮತ್ತು ಚಿಕಿತ್ಸೆ ಒದಗಿಸಿದೆ.

ಗುಣಮುಖವಾಗುವ ಕಡೆಗೆ ಪ್ರಯಾಣ
ಅಸ್ಥಿ ಮಜ್ಜೆ ಕಸಿಯ ಬಳಿಕ ರಘು (ಹೆಸರು ಬದಲಾಯಿಸಲಾಗಿದೆ) ಚೇತರಿಕೆಯ ಲಕ್ಷಣಗಳನ್ನು ತೋರಿಸುತ್ತಿದ್ದು, ಭರವಸೆ ಮೂಡಿಸಿದೆ. ಮುಂದಿನ ವಾರಗಳಲ್ಲಿ, ಸೋಂಕುಗಳು ಮತ್ತು ಗ್ರಾಫ್ಟ್-ವರ್ಸಸ್-ಹೋಸ್ಟ್ ಕಾಯಿಲೆಯಂತಹ ಸಂಭಾವ್ಯ ತೊಂದರೆಗಳ ಕುರಿತು ನಮ್ಮ ವೈದ್ಯಕೀಯ ನಿಕಟವಾಗಿ ನಿಗಾ ವಹಿಸಲಿದೆ.

ಈ ಕುರಿತು ಮಾತನಾಡಿರುವ ಡಾ.ಸಚಿನ್ ಜಾಧವ್ ಅವರು, “ಅತ್ಯಾಧುನಿಕ ಮತ್ತು ಸಹಾನುಭೂತಿಯ ಚಿಕಿತ್ಸೆ ಒದಗಿಸುವ ನಮ್ಮ ಬದ್ಧತೆಗೆ ಈ ನಡೆಯು ಒಂದು ಉತ್ತಮ ಪುರಾವೆಯಾಗಿದೆ. ಕಳೆದ ಹಲವು ವರ್ಷಗಳಲ್ಲಿ ನಮ್ಮ ತಂಡವು ಉತ್ತಮ ಚಿಕಿತ್ಸೆ ನೀಡುತ್ತಾ ಬಂದಿದ್ದು, ಅಂತಾರಾಷ್ಟ್ರೀಯ ಆಸ್ಪತ್ರೆಗೆ ಗುಣಮಟ್ಟಕ್ಕೆ ಸರಿ ಹೊಂದುವ ಚಿಕಿತ್ಸೆ ಒದಗಿಸುತ್ತಿದೆ. ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವ ನಮ್ಮ ವೈದ್ಯರು, ದಾದಿಯರು, ಕ್ಲಿನಿಕಲ್ ಫಾರ್ಮಕಾಲಜಿಸ್ಟ್‌ ಗಳು ಮತ್ತು ಆಸ್ಪತ್ರೆಯ ಸಹಾಯಕ ಸಿಬ್ಬಂದಿಗಳು ಇದಕ್ಕೆಲ್ಲಾ ಕಾರಣಕರ್ತರಾಗಿದ್ದಾರೆ. ನಾವು ರಘು ಅವರ ಆರೋಗ್ಯ ಸುಧಾರಣೆ ಕುರಿತು ಭರವಸೆ ಹೊಂದಿದ್ದೇವೆ ಮತ್ತು ಅವರು ಸಾಮಾನ್ಯ ಜೀವನ ನಡೆಸುವುದನ್ನು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.