ತುಮಕೂರು: ತುಮಕೂರಿನ ಪಾವಗಡದಲ್ಲಿ ಮತ್ತೊಂದು ಬಸ್ ದುರಂತ ಸ್ವಲ್ಪದರಲ್ಲೇ ತಪ್ಪಿದೆ.
ಧಾರಾಕಾರ ಮಳೆಯಿಂದಾಗಿ ವೆಂಕಟಾಪುರ ಬಳಿಯಿರುವ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದೆ. ಹೀಗಿದ್ದರೂ ಜಾಗರೂಕತೆ ವಹಿಸಬೇಕಿದ್ದ ಚಾಲಕ, ಹಿಂದು-ಮುಂದು ಯೋಚಿಸಿದೆ ಸೇತುವೆ ಮೇಲೆಯೇ ಬಸ್ ಚಲಾಯಿಸಿಕೊಂಡು ಹೋಗಿದ್ದಾನೆ. ಪರಿಣಾಮ ಬಸ್ ಸೇತುವೆ ನಡುವೆಯೇ ಬಸ್ ಸಿಲುಕಿತು.
ಹಿಂದೂಪುರದಿಂದ ವೆಂಕಟಾಪುರ ಮಾರ್ಗವಾಗಿ ಪಾವಗಡಕ್ಕೆ ಬಸ್ ಬರುತ್ತಿತ್ತು. ಸೇತುವೆ ಮೇಲಿನ ನೀರಿನ ರಭಸಕ್ಕೆ ಬಸ್ ಮುಂದೆ ಸಾಗದೆ ಅಲ್ಲಿಯೇ ನಿಂತಿತು. ಬಸ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ತುಂಬಿದ್ದರು. ವೆಂಕಟಾಪುರ ಗ್ರಾಮಸ್ಥರು ಹಗ್ಗದ ಸಹಾಯದಿಂದ ಬಸ್ನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಚಾಲಕ ಬಸ್ ಚಲಾಯಿಸಿಕೊಂಡು ಇನ್ನು ಸ್ವಲ್ಪ ಮುಂದೆ ಹೋಗಿದ್ದರೆ, ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ದುರಂತ ತಪ್ಪಿದೆ.
ಹಿಂದೊಮ್ಮೆ ಪಾವಡಗದಲ್ಲಿ ಬಸ್ ಪಲ್ಟಿಯಾಗಿ 6 ಮಂದಿ ಸ್ಥಳದಲ್ಲೇ ಮೃತಪಟ್ಟು, ಸಾಕಷ್ಟು ಜನರು ಗಂಭೀರವಾಗಿ ಗಾಯಗೊಂಡಿದ್ದರು.