Tuesday, 26th November 2024

ಜೂನಿಯರ್ ವಾರ್ಡನ್ ಗಳನ್ನು ಹಿಂದಕ್ಕೆ ಕರೆಸಿಕೊಳ್ಳಿ

ಮಧುಗಿರಿ : ಎಲ್ಲ ಇಲಾಖೆಗಳ ಹಾಸ್ಟೆಲ್‌ಗಳಲ್ಲಿ ನಿಯಮ ಮೀರಿ ಪಾಠ ಮಾಡದ ಜೂನಿಯರ್ ವಾರ್ಡನ್‌ಗಳನ್ನು ನೇಮಿಸಿರುವ ಹಿನ್ನಲೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಜೂನಿಯರ್ ವಾರ್ಡನ್ ಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಆದಿ ಜಾಂಬವ ಮಹಾಸಭಾ ಅಧ್ಯಕ್ಷ ಮಹರಾಜು ಸಭೆಯಲ್ಲಿ ಒತ್ತಾಯಿಸಿದರು.

ಪಟ್ಟಣದ ತಾ.ಪಂ.ಸಾಮರ್ಥ್ಯಸೌಧದಲ್ಲಿ ನಡೆದ ಉಪವಿಭಾಗ ಮಟ್ಟದ ದಲಿತ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಯ ಆದೇಶದಲ್ಲಿ ಜೂನಿಯರ್ ವಾರ್ಡನ್‌ಗಳನ್ನು ನೇಮಿಸಲು ಅವಕಾಶವಿಲ್ಲ.

ಇವರು ಮಕ್ಕಳಿಗೆ ಶಿಕ್ಷಣವನ್ನು ನೀಡ ಬೇಕಿದ್ದು, ಯಾರಿಗೂ ಜ್ಞಾನವಿಲ್ಲದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ಸರ್ಕಾರದ ಹಾಸ್ಟೆಲ್‌ಗಳು ವಿದ್ಯುತ್ ಬಿಲ್ ಕಟ್ಟಿಲ್ಲವೆಂದು ವಿದ್ಯುತ್ ಕಡಿತ ಮಾಡಿದರೆ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಿದರು.

ತಾಲೂಕಿನ ಕೆಆರ್‌ಐಡಿಎಲ್ ಇಲಾಖೆಯ ಇಂಜಿನಿಯರ್ ಹನುಮಂತರಾಯಪ್ಪ ದಲಿತ ವಿರೋದಿ ನೀತಿ ಅನುಸರಿಸುತ್ತಿದ್ದು, ದಲಿತರೇ ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾರೆ ಹಾಗೂ ಇಲಾಖೆಯಲ್ಲಿ ಲೂಟಿ ಮಾಡುತ್ತ ಅಭಿವೃದ್ಧಿ ವಿರೋಧಿಯಾಗಿದ್ದಾರೆ. ಕೂಡಲೆ ಇವರನ್ನು ಸಭೆಗೆ ಕರೆಸಿ ಸಸ್ಪೆಂಡ್ ಮಾಡುವಂತೆ ದಲಿತ ಮುಖಂಡರು ಒಕ್ಕೊರಲ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಎಇಇ ನಾಗಯ್ಯ ಈಗಾಗಲೇ ಹನುಮಂತರಾಯಪ್ಪನನ್ನು ಮಧುಗಿರಿಯಿಂದ ಕೊರಟಗೆರೆಗೆ ವರ್ಗಾಯಿಸಿದ್ದೇವೆ. ಅವರು ಮಾಡಿದ ಕಾಮಗಾರಿಯಲ್ಲಿ ಯಾವುದಾದರೂ ಲೋಪವಿದ್ದು ದೂರು ನೀಡಿದರೆ ಕ್ರಮವಹಿಸ ಲಾಗುವುದು ಎಂದರು.

ಪುರಸಭೆಯ ಹಾಗೂ ನಗರ ಸಭೆಯ ಅಂಗಡಿ ಮಳಿಗೆಗಳ ಮೀಸಲಾತಿಯಲ್ಲಿ ಅನ್ಯಾಯವಾಗಿದ್ದು ಕಾನೂನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಲು ಎಂ.ವೈ.ಶಿವಕುಮಾರ್ ಹಾಗೂ ಶಿರಾ ರಾಜು, ಆಗ್ರಹಿಸಿದರು.

ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಬಗ್ಗೆ ಮಾತನಾಡಿದ ಎಂ.ವೈ.ಶಿವಕುಮಾರ್, ಕಣಿಮಯ್ಯ, ತುಂಡೋಟಿ ರಾಮಾಂಜಿ ಹಾಗೂ ರಂಗನಾಥ್ ರವರು ಡಾ.ಗಂಗಾಧರ್ ಕನ್ನಡಕ ಮಾರಲು ಆಸ್ಪತ್ರೆಗೆ ರ‍್ತಾರೆ. ಕೆಲವರು ಹೊರಗೆ ಖಾಸಗಿ ಕ್ಲಿನಿಕ್ ಆರಂಭಿ ಸಿದ್ದು, ಬಡವರ ಕೈಗೆ ಸಿಗ್ತಿಲ್ಲ. ಆಸ್ಪತ್ರೆಯಲ್ಲೂ ಕೆಲವು ಲೋಪಗಳಿದ್ದು ಅವುಗಳನ್ನು ಸರಿಪಡಿಸಲು ಒತ್ತಾಯಿಸಿದರು. ನಕಲಿ ವೈದ್ಯರ ಬಗ್ಗೆ ಟಿಹೆಚ್‌ಓ ರವರಿಗೆ ಹಾಗೂ ಆಸ್ಪತ್ರೆಯ ಸೋಮಾರಿ ವೈದ್ಯರಿಗೆ ಚುರುಕು ಮುಟ್ಟಿಸಲು ವೈದ್ಯಾಧಿಕಾರಿ ಡಾ.ರತ್ನಾವತಿ ರವರಿಗೆ ಸೂಕ್ತ ಕ್ರಮವಹಿಸಲು ಉಪವಿಭಾಗಾಧಿಕಾರಿ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಕೂಡ ದಲಿತರ ಅನುದಾನ ದುರುಪಯೋಗ ಆಗುತ್ತಿದ್ದರೂ ಕ್ರಮ ವಹಿಸಿಲ್ಲ. ತಿಂಗಳಿಗೊಮ್ಮೆ ಸಮಾಜ ಕಲ್ಯಾಣಾಧಿಕಾರಿ ಬದಲಾಗುತ್ತಿದ್ದು, ಖಾಯಂ ಅಧಿಕಾರಿಯಿಲ್ಲದೆ ಸಮಾಜವನ್ನು ನಿರ್ಲಕ್ಷಿಸಿದ್ದಾರೆ. ನಮ್ಮ ಹಣವನ್ನು ಸಾರ್ವಜನಿಕ ರುದ್ರ ಭೂಮಿ ಅಭಿವೃದ್ಧಿಗೆ ಬಳಸುತ್ತಾರೆ. ಆದರೆ ನಮ್ಮ ಹೆಣಗಳನ್ನು ಹೂಳಲು ಇತರರು ಬಿಡ್ತಿಲ್ಲ. ನಾವು ಒಂದಾದರೂ ಬೇರೆಯವರು ಒಂದಾಗಲ್ಲ. ಇದರಿಂದ ಪ್ರತ್ಯೇಕ ರುದ್ರಭೂಮಿ ಬೇಕಿದೆ ಎಂದು ಕೊರಟಗೆರೆಯ ವೆಂಕಟೇಶ್ ತಿಳಿಸಿದರೆ, ದಲಿತರ ಹಣ ಸರಿಯಾಗಿ ಬಳಕೆಯಾದರೆ ನಾವು ಬಡವರಲ್ಲ ಎಂದ ಪಾವಗಡದ ನಾರಾಯಣಪ್ಪ ವಾರ್ಡನ್‌ಗಳು ಮಾತ್ರ ೩ ಅಂತಸ್ತಿನ ಮನೆ ಕಟ್ಟುತ್ತಿದ್ದಾರೆ. ಗಂಗಾಕಲ್ಯಾಣ ಯೋಜನೆಯಲ್ಲಿ ಬೃಹತ್ ಹಗರಣ ನಡೆದಿದ್ದು ತನಿಖೆ ನಡೆಯಲಿ ಎಂದರು.

ಹಾಸ್ಟೆಲ್‌ನಲ್ಲಿನ ಹೊರಗುತ್ತಿಗೆ ನೌಕರರು ಕೆಲಸ ಮಾಡಿದರೆ ಖಾಯಂ ಸಿಬ್ಬಂದಿಗಳು ಕರ್ತವ್ಯಲೋಪ ಎಸಗುತ್ತಿದ್ದಾರೆ ಎಂದು ದೊಡ್ಡೇರಿ ಕಣಿಮಯ್ಯ ಅಸಮಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪವಿಭಾಗದ ತಹಶೀಲ್ದಾರ್‌ಗಳು, ತಾ.ಪಂ.ಇಓಗಳು, ಸಿಪಿಐಗಳು, ಪಿಎಸೈಗಳು, ಎಲ್ಲ ಇಲಾಖೆಯ ಅಧಿಕಾರಿಗಳು, ದಲಿತ ಮುಖಂಡರು ಭಾಗವಹಿಸಿದ್ದರು.