ಗುಬ್ಬಿ : ಕಾನೂನು ಅಡಿಯಲ್ಲಿ ಮಹಿಳೆಯರಿಗೆ ಇರುವಂತಹ ಹಕ್ಕುಗಳು ಹಾಗೂ ಕಾನೂನುಗಳನ್ನು ದುರುಪ ಯೋಗಪಡಿಸಿಕೊಳ್ಳದೆ ನ್ಯಾಯಕ್ಕಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ನ್ಯಾಯಾಧೀಶೆ ಮಂಜುಳಾ ಉಂಡಿ ಶಿವಪ್ಪ ತಿಳಿಸಿದರು.
ತಾಲೂಕಿನ ಸಿ ಎಸ್ ಪುರ ವಲಯದ ಕಲ್ಲೂರ ಗ್ರಾಮದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿ ಕುಟುಂಬದಲ್ಲಿ ತಾಯಿಯ ಪಾತ್ರ ಮಹತ್ವದ್ದು ತಾಯಂದಿರು ತಮ್ಮ ಮಕ್ಕಳನ್ನು ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯನ್ನಾಗಿ ಸೃಷ್ಟಿ ಮಾಡುವ ಕಡೆಗೆ ಒಲವು ತೋರಿಸಬೇಕು ಹಣ ಸಂಪಾದನೆ ಮಾಡುವುದಕ್ಕಿಂತಲೂ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡುವಂತಹ ಮಹಾನ್ ವ್ಯಕ್ತಿಗಳನ್ನಾಗಿ ರೂಪಿಸ ಬೇಕು ಎಂದರು.
ಯೋಜನಾಧಿಕಾರಿ ರಾಜೇಶ್ ಮಾತನಾಡಿ ಜ್ಞಾನವಿಕಾಸ ಕಾರ್ಯಕ್ರಮದಡಿ ಮಹಿಳೆಯರಿಗೆ ಕಾನೂನಿನ ಬಗ್ಗೆ ಅರಿವು, ಸ್ವ ಉದ್ಯೋಗ, ಉಳಿತಾಯ, ಆರೋಗ್ಯ ಮತ್ತು ಆಹಾರದ ಬಗ್ಗೆ ಅರಿವು ಮಾನಸಿಕ ಸದೃಢತೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಒಳಗೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಮಹಿಳಾ ಸಬಲೀಕರಣಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಕೃಷ್ಣಪ್ಪ, ವಕೀಲರಾದ ನಂದೀಶ್, ರವೀಶ್, ಗ್ರಾ ಪಂ ಸದಸ್ಯೆ ಶಾಂತಮ್ಮ , ಮೇಲ್ವಿಚಾರಕರಾದ ರೇಣುಕ, ಮಂಜುನಾಥ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಪ್ರೇಮ, ಸೇವಾ ಪ್ರತಿನಿಧಿ ನೇತ್ರಾವತಿ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.