Sunday, 15th December 2024

ನವೋದಯ ಶಾಲೆ ಪ್ರವೇಶ: ಅರ್ಜಿ ಸಲ್ಲಿಸಿದ್ದರೂ ಪರೀಕ್ಷೆಯಿಲ್ಲ

ತುಮಕೂರು: ನವೋದಯ ವಸತಿ ಶಾಲೆ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರೂ ತಾಂತ್ರಿಕ ಕಾರಣದಿಂದ ಮಕ್ಕಳಿಗೆ ಪರೀಕ್ಷೆ ನೀಡದೆ ನಿರ್ಲಕ್ಷ್ಯ ಮಾಡಿರುವುದರಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಏ. ೨೯ ರಂದು ನಡೆಯುವ ಪರೀಕ್ಷೆಗೆ ವಿದ್ಯಾರ್ಥಿನಿ ವಿ.ಎಂ. ಸಾಯಿ ತೇಜಸ್ವಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಸಂಖ್ಯೆಯ ಕೂಡ ಲಭಿಸಿತ್ತು. ಆದರೆ ಅದೇ ಅರ್ಜಿಯ ಸಂಖ್ಯೆ ಮತ್ತೊಬ್ಬ ವಿದ್ಯಾರ್ಥಿಗೆ ಲಗತ್ತಾಗಿದ್ದು ಪ್ರವೇಶ ಪತ್ರ ದೊರೆತಿಲ್ಲ. ಈ ಸಂಬಂಧ ನವೋದಯ ಶಾಲೆಯ ಆಡಳಿತ ಮಂಡಳಿಯವರನ್ನು ಸಂಪರ್ಕಿಸಿದಾಗ ನಾವು ವೆಬ್ ಸೈಟ್ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯವರಿಗೆ ನೀಡಿದ್ದೇವೆ. ಇದು ನಮ್ಮ ತಪ್ಪಲ್ಲ ಎಂದು ಹೇಳಿ ನಿರ್ಲಕ್ಷ್ಯ ತೋರಿದ್ದಾರೆ. ಈ ಸಂಬಂಧ ಪೋಷಕರು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿ ಪರೀಕ್ಷೆಗೆ ಅವಕಾಶ ಕಲ್ಪಿಸಲು ಕೋರಿದ್ದಾರೆ.
ಪ್ರತಿಭಾನ್ವಿತ ಬಡ ಮಕ್ಕಳ ಜೀವನದ ಜತೆ ಆಟವಾಡುತ್ತಿರುವ ನವೋದಯ ವಸತಿ ಶಾಲೆಯ ತಾತ್ಸಾರಕ್ಕೆ ಪೋಷಕರು ಕಿಡಿಕಾರಿದ್ದಾರೆ. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಈ ರೀತಿಯ ತೊಂದರೆ ಯಾಗಿದ್ದು ಮಧ್ಯೆ ಪ್ರವೇಶಿಸಿ ನ್ಯಾಯಕೊಡಿಸಬೇಕೆಂದು ನೊಂದ ಪೋಷಕರು ಆಗ್ರಹಿಸಿ ದ್ದಾರೆ.