ತುಮಕೂರು: ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಶಾಸಕ ಡಿ.ಸಿ.ಗೌರಿಶಂಕರ್ ಕಂದಾಯ ಸಚಿವರಾಗುತ್ತಾರೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ರೈತರ ಅಭ್ಯುದಯಕ್ಕಾಗಿ ಪಂಚರತ್ನ ಯೋಜನೆಗಳನ್ನು ಘೋಷಿಸಿದ್ದಾರೆ. ಈಗಾಗಲೇ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಪಂಚರತ್ನ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಕಾರ್ಯ ಮಾಡುತ್ತಿದ್ದು ಈ ಬಾರಿ ಪಕ್ಷ ಅಧಿಕಾರ ಹಿಡಿಯು ವುದು ಖಚಿತ ಎಂದರು.
ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಇತಿಹಾಸ ನಿರ್ಮಾಣ ಮಾಡಿದೆ. ಶಾಸಕ ಡಿ.ಸಿ.ಗೌರಿಶಂಕರ್ ಅವರ ಮೇಲಿನ ಪ್ರೀತಿ, ವಿಶ್ವಾಸದಿಂದ ಮೂಲೆ ಮೂಲೆಯಿಂದ ಜನರು ಸಮಾವೇಶಕ್ಕೆ ಬಂದಿರುವುದು ಸಂತೋಷದ ವಿಚಾರವಾಗಿದೆ. ಈ ಬಾರಿ ಗೌರಿಶಂಕರ್ ಅವರು ಗೆಲುವು ಖಚಿತವಾಗಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದವರಿಗೆ ಜನರು ತಕ್ಕಪಾಠ ಕಲಿಸಬೇಕು ಎಂದು ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಗೌರಿ ಶಂಕರ್ ಅವರ ಗೆಲುವು ಜನರ ಗೆಲುವಾಗಿದೆ. ಗೌರಿಶಂಕರ್ ಅವರು ಕರೋನಾ ಸಮಯದಲ್ಲಿ ಜನೋಪಯೋಗಿ ಕೆಲಸ ಮಾಡಿದ್ದು ಸಂಸ್ಕಾರವಂತರಾಗಿದ್ದಾರೆ. ಈ ಬಾರಿಯೂ ಅವರು ಗೆಲ್ಲುವುದರಲ್ಲಿ ಎರಡು ಮಾತಿಲ್ಲ ಎಂದರು.
ಶಾಸಕ ಡಿ.ಸಿ. ಗೌರಿಶಂಕರ್ ಮಾತನಾಡಿ, ತಾವು ಕ್ಷೇತ್ರದ ಶಾಸಕನಾಗಿ ಎಂದೂ ಸಹ ಕೆಲಸ ಮಾಡಿಲ್ಲ ಬದಲಾಗಿ ಕ್ಷೇತ್ರದ ಪ್ರತಿಯೊಂದು ಮನೆಯ ಮಗನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕ್ಷೇತ್ರಕ್ಕೆ ೨,೮೦೦ಕೋಟಿ ರು.ಗಳ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ವಿಶೇಷವಾಗಿ ನೀರಾ ವರಿಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ವೃಷಭಾವತಿ ನೀರನ್ನು ತಾಲ್ಲೂಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ತಿಳಿಸಿ ಮುಂದಿನ ಚುನಾವಣೆಯಲ್ಲಿ ತಮ್ಮನ್ನು ಆಶೀರ್ವದಿಸಬೇಕಾಗಿ ಮನವಿ ಮಾಡಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ರಾಜ್ಯ ವಕ್ತಾರ ಹಾಲನೂರು ಲೇಪಾಕ್ಷ, ಡಿ.ಸಿ.ವೇಣುಗೋಪಾಲ್, ಜಿ.ಪಾಲನೇತ್ರಯ್ಯ, ಎನ್.ಆರ್. ಹರೀಶ್, ಹಿರೇಹಳ್ಳಿ ಮಹೇಶ್, ಹಾಲನೂರು ಅನಂತ್ ಕುಮಾರ್,ವೆಂಕಟೇಶ್, ಜೆಡಿಎಸ್ ಮುಖಂಡರು, ಕಾರ್ಯಕರ್ತರು, ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.