ತುಮಕೂರು: 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರಕಾರ ಆಯೋಜಿಸಿದ್ದ ಮಹತ್ವಕಾಂಕ್ಷಿ ಕೋಟಿ ಕಂಠ ಗಾಯನ ಅಂಗವಾಗಿ ಶ್ರೀ ಸಿದ್ಧಗಂಗಾ ಮಠ ಕ್ಷೇತ್ರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠ ಹಾಗೂ ವಿವಿಧ ಶಾಲೆಗಳ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಡಗೀತೆ ಸೇರಿದಂತೆ 6 ಕನ್ನಡ ಗೀತೆಗಳನ್ನು ಸಾಮೂಹಿಕವಾಗಿ ಹಾಡುವ ಮೂಲಕ ಮೆರುಗು ತಂದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆಯ ಈ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ರಚನೆಯ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ ಮತ್ತು ‘ಬಾರಿಸು ಕನ್ನಡ ಡಿಂಡಿಮವ’, ಹುಯಿಲಗೋಳ ನಾರಾಯಣ ರವರ ರಚನೆಯ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಡಾ: ಡಿ.ಎಸ್. ಕರ್ಕಿರವರ ‘ಹಚ್ಚೇವು ಕನ್ನಡದ ದೀಪ’, ಚೆನ್ನವೀರ ಕಣವಿರವರ ‘ವಿಶ್ವ ವಿನೂತನ ವಿದ್ಯಾಚೇತನ’ ಹಾಗೂ ಹಂಸಲೇಖರವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳಿಗೆ ಸಾಮೂಹಿಕ ಗೀತ ಗಾಯನ ಮಾಡಲಾಯಿತು.
ಜಿಪಂ ಸಿಇಒ ಡಾ: ಕೆ. ವಿದ್ಯಾಕುಮಾರಿ ಮಾತನಾಡಿ, ಕನ್ನಡ ರಾಜ್ಯೋತ್ಸವವನ್ನು ರಾಜ್ಯ ಸರ್ಕಾರ ವಿಶೇಷವಾಗಿ ಆಚರಿಸಲು ಉದ್ದೇಶಿಸಿ ಕೋಟಿ ಕಂಠ ಗಾಯನ ಕಾರ್ಯಕ್ರಮ ವನ್ನು ‘ನನ್ನ ಹಾಡು ನನ್ನ ಹಾಡು’ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದೆ. ಕಳೆದ ವರ್ಷ ಲಕ್ಷ ಕಂಠ ಗಾಯನವನ್ನು ತುಂಬಾ ಯಶಸ್ವಿಯಾಗಿ ಜಿಲ್ಲಾಡಳಿತ ಆಯೋಜಿಸಿತ್ತು. ಈ ಬಾರಿ ನಮ್ಮ ನಾಡಿನ ಹೆಚ್ಚಿನ ಕವಿಗಳು ಮೆಚ್ಚಿಸಿರುವಂತಹ ನಾಡು, ನುಡಿ ಹಾಗೂ ನಮ್ಮ ಪರಂಪರೆಯ ಬಗ್ಗೆ ಅಭಿಮಾನವನ್ನು ಮೂಡಿಸುವಂತಹ ಕನ್ನಡ ಗೀತೆಗಳ ಕೋಟಿ ಕಂಠ ಗಾಯನ ಕಾರ್ಯಕ್ರಮ ವನ್ನು ಮಾಡುತ್ತಿದ್ದೇವೆ. ರಾಜ್ಯಾದ್ಯಂತ ಈ ಕಾರ್ಯಕ್ರಮ ನಡೆಯುತ್ತಿದ್ದು, ಯಶಸ್ವಿಯಾಗಿ ಜಿಲ್ಲೆಯಲ್ಲಿ ಕಾರ್ಯಕ್ರಮ ನೆರವೇರಿದೆ ಎಂದು ಹೇಳಿದರು.
ಕನ್ನಡ ಸಂಕಲ್ಪ ವಿಧಿಯನ್ನು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಬೋಧಿಸಿದರು. ವೇದಿಕೆ ಮೇಲಿದ್ದ ಗಣ್ಯರು ಹಾಗೂ ಕಾರ್ಯ ಕ್ರಮದಲ್ಲಿ ನೆರೆದಿದ್ದವರು ಕನ್ನಡ ಸಂಕಲ್ಪ ಕೈಗೊಂಡರು.
ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿ ಆಯೋಜಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ವಿವಿಧ ಕನ್ನಡ ಸಂಘಟನೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಹಸ್ರಾರು ಸಂಖ್ಯೆಯಲ್ಲಿದ್ದ ಸಾರ್ವಜನಿಕರೂ ಸಹ ಕೋಟಿ ಕಂಠ ಗಾಯನಕ್ಕೆ ಧ್ವನಿ ಗೂಡಿಸಿದರು.
ಚಲನಚಿತ್ರ ನಟ ಅಭಿಜಿತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಉಪ ವಿಭಾಗಾಧಿಕಾರಿ ವಿ. ಅಜಯ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಟಿ.ಎಸ್.ಎಲ್. ಪ್ರೇಮಾ, ಜಿಲ್ಲಾ ವಾರ್ತಾಧಿಕಾರಿ ಎಂ.ಆರ್. ಮಮತ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನಾ, ಡಿಡಿಪಿಐ ಸಿ. ನಂಜಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.