Thursday, 25th July 2024

ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಶಿವಸಿದ್ದೇಶ್ವರ ಸ್ವಾಮೀಜಿ

ರಂಗನಾಥ ಕೆ.ಮರಡಿ
ತುಮಕೂರು: ತುಮಕೂರಿನ ಸಿದ್ದಗಂಗಾ ಮಠ, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠ ಹಾಗೂ ವಿಜಯಪುರ ಬಸವಕಲ್ಯಾಣ ಮಠದ ಉತ್ತರಾಧಿಕಾರಿಗಳಿಗೆ ಸಿದ್ಧಗಂಗಾ ಮಠದಲ್ಲಿ ಅಕ್ಷಯ ತೃತೀಯದಂದು ಅಮತ  ಘಳಿಗೆ ಯಲ್ಲಿ  ಪಟ್ಟಾಭಿಷೇಕ ನೆರವೇರಿಸಲಾಯಿತು.
ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ (ಪೂರ್ವಾಶ್ರಮದ ಹೆಸರು ಮನೋಜ್ ಕುಮಾರ್) ಬಂಡೇ ಮಠದ ಉತ್ತರಾಧಿ ಕಾರಿಯಾಗಿ ಶ್ರೀಮಹಾಲಿಂಗ ಸ್ವಾಮೀಜಿ (ಪೂರ್ವಾಶ್ರಮದ ಹೆಸರು ಹರ್ಷ), ದೇವನಹಳ್ಳಿಯ ಬಸವ ಕಲ್ಯಾಣ ಮಠದ ಉತ್ತರಾಧಿಕಾರಿಯಾಗಿ ಶ್ರೀ ಸದಾಶಿವ ಸ್ವಾಮೀಜಿ (ಪೂರ್ವಾಶ್ರಮದ ಹೆಸರು ಗೌರಿಶ್‌ಕುಮಾರ್) ಅವರಿಗೆ ಅಭಿದಾನ ಘೋಷಣೆ ಮಾಡಲಾಯಿತು.
ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮೀಜಿ ಮಾತನಾಡಿ, ಮಠದ ಉತ್ತರಾಧಿಕಾರಿಯಾಗಿ ಮನೋಜ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ನಿಮಿತ್ತವಾಗಿ ಶ್ರೀ ಶಿವಸಿದ್ದೇಶ್ವರ ಎಂದು ಅಭಿದಾನ ಮಾಡಿದ್ದೇವೆ. ಶ್ರೀ ಶಿವಕುಮಾರ ಶ್ರೀಗಳ ಉತ್ತರಾಧಿಕಾರಿಯಾಗಿ ನಾನು ಹೇಗೆ ಆಯ್ಕೆ ಆದೆ ಎಂಬುದೇ ನನಗೆ ಗೊತ್ತಿಲ್ಲ. ನನಗೆ ವಿದ್ಯೆ, ರೂಪ, ಬುದ್ಧಿ ಏನೂ ಇರಲಿಲ್ಲ. ನನ್ನಲ್ಲಿನ ಯಾವ ಗುಣ ಶಿವಕುಮಾರ ಶ್ರೀಗಳಿಗೆ ಇಷ್ಟ ಆಯಿತೋ ಗೊತ್ತಿಲ್ಲ. ಅಂತೂ ನಾನು ಸಿದ್ದಗಂಗಾ ಮಠದ ಉತ್ತರಾಧಿ ಕಾರಿಯಾದೆ. ಶಿವಕುಮಾರ ಶ್ರೀಗಳ ಬದುಕು, ಸಾಧನೆ ವಿಸ್ಮಯ, ಆಶ್ಚರ್ಯಕರ ಎಂದರು.
ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಹಾಗೂ ಹಲವು ಮಠಾಧ್ಯಕ್ಷರು ಭಾಗವಹಿಸಿದ್ದರು.
ಗದ್ಗದಿತರಾದ ಸಿದ್ದಲಿಂಗ ಸ್ವಾಮೀಜಿ
ಹಿರಿಯ ಶ್ರೀಗಳ ಆಶಯದಂತೆ ಮಠ ನಡೆಯುತ್ತಿದೆ. ನಮ್ಮ ಉತ್ತರಾಧಿಕಾರಿಯಾಗಿ ಪಟ್ಟಾಧಿ ಕಾರಿಯಾಗಿರುವ ಶಿವಸಿದ್ದೇಶ್ವರ ಸ್ವಾಮಿಗಳು, ಶಿವಕುಮಾರ ಶ್ರೀಗಳ ಕಾರುಣ್ಯಕ್ಕೆ ಒಳಗಾದ ವರು. ನಾನು ಅಲ್ಪ ಆಯುಷಿ ಎಂದು ಶಿವಕುಮಾರ ಶ್ರೀಗಳು ನನಗೆ ಹೇಳುತ್ತಿದ್ದರು. ಹಾಗಾಗಿ ಅವರೇ ನನ್ನ ಉತ್ತರಾಧಿಕಾರಿಯನ್ನು ನೇಮಿಸಿಕೊಳ್ಳುವಂತೆ ಹೇಳುತ್ತಿದ್ದರು. ಆದರೆ ನಾನು ಒಪ್ಪಿರಲಿಲ್ಲ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ಗದ್ಗದಿತರಾದರು.
ವಟುಗಳ ತಂದೆ, ತಾಯಿಗೆ ಗೌರವ: ಇದಕ್ಕೂ ಮೊದಲು ನೂತನ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ್ತರಾದ ಮೂವರು ವಟುಗಳ ತಂದೆ ತಾಯಿಗೆ  ಸಿದ್ಧಗಂಗಾ ಮಠದ ಆಡಳಿತ ಮಂಡಳಿಯಿಂದ ಶಾಲು ಹೊದಿಸಿ, ಗೌರವ ಸಲ್ಲಿಸಲಾಯಿತು.
error: Content is protected !!