Thursday, 12th December 2024

Tumkur News: ವ್ಯಾಯಾಮದಿಂದ ಉತ್ತಮ ಆರೋಗ್ಯ-ಸಿದ್ಧಲಿಂಗ ಸ್ವಾಮೀಜಿ 

ತುಮಕೂರು:  ವ್ಯಾಯಾಮ ಜತೆಗೂಡಿದ ಮಿತಹಾರ-ವಿಹಾರಗಳನ್ನು ರೂಢಿಸಿಕೊಂಡಾಗ ಮಾತ್ರ ಉತ್ತಮ ಆರೋಗ್ಯ ದೊರಕಲು ಸಾಧ್ಯ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕಿವಿಮಾತು ಹೇಳಿದರು.

ನಗರದಲ್ಲಿ ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದ್ದ ಸಿದ್ಧಗಂಗಾ ಹೆಲ್ತ್ ರನ್ ೧೦ಕೆ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚುತ್ತಿದ್ದು, ದೈಹಿಕ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಇವತ್ತಿನ ಓಟದಲ್ಲಿ ಸುರಿವ ಮಳೆ ಯನ್ನು ಲೆಕ್ಕಿಸದೆ ಕಿರಿಯರಿಂದ ಹಿರಿಯರವರೆಗೆ ಎಲ್ಲರೂ ಭಾಗವಹಿಸಿರುವುದು ಸ್ಪೂರ್ತಿದಾಯಕ ಎಂದರು.

ಒಲಂಪಿಕ್ ಕ್ರೀಡಾಪಟು ಅಶ್ವಿನಿ ಅಕ್ಕುಂಜಿ ಮಾತನಾಡಿ, ಕ್ರೀಡಾ ಚಟುವಟಿಕೆಗಳೇ ಪರಿಪೂರ್ಣ ಆರೋಗ್ಯದ ಗುಟ್ಟು, ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಂಡಾಗ ಮಾತ್ರ ಸದೃಢ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಮ್ಯಾರಥಾನ್‌ಗೆ ಭಾಗಿಯಾಗಿ ಪರಮಪೂಜ್ಯರ ಆಶೀರ್ವಾದ ಪಡೆದಿದ್ದು ನನ್ನ ಸುಕೃತ ಎಂದರು.

ಸೂಪರ್ ಸ್ಪೆಷಾಲಿಟಿ ವಿಭಾಗದ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಮಾತನಾಡಿ ಇಂದು ವಿಶ್ವದೆಲ್ಲೆಡೆ ಹೃದಯ ದಿನವನ್ನು ಆಚರಿಸಲಾಗುತ್ತಿದ್ದು, ದೈಹಿಕ ಚಟುವಟಿಕೆಯ ಕೊರತೆ, ತಪ್ಪಿದ ಆಹಾರಪದ್ಧತಿ, ದುಶ್ಚಟಗಳ ಮ್ಯಾಮೋಹದಿಂದ ಹೆಚ್ಚುತ್ತಿರುವ ಹೃದ್ರೋಗ ಸಮಸ್ಯೆಗಳ ಕುರಿತು ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಕಾರ್ಯದರ್ಶಿ ಟಿ.ಎಂ.ಸ್ವಾಮಿ ಮಾತನಾಡಿ ಸಿದ್ಧಗಂಗಾ ಆಸ್ಪತ್ರೆ ಆರೋಗ್ಯ ದಾಸೋಹದ ಮೂಲಕ ಎಲ್ಲಾ ವರ್ಗದ ಜನರನ್ನು ತಲುಪುತ್ತಿದ್ದು,ಮ್ಯಾರಥಾನ್ ಮುಖಾಂತರ ಹೃದ್ರೋಗ ಕಾಳಜಿಗೆ ನೇತೃತ್ವ ವಹಿಸಿದೆ ಎಂದರು.

ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ ಕಳೆದ ಪರಮಪೂಜ್ಯ ಸಿದ್ಧಲಿಂಗ ಶ್ರೀಗಳ ಮಾರ್ಗ ದರ್ಶನದಂತೆ ಐದು ವರ್ಷಗಳಿಂದ ನಾವು ಮ್ಯಾರಥಾನ್ ಆಯೋಜಿಸುತ್ತಾ ಬಂದಿದ್ದು, ರಾಜ್ಯವಷ್ಟೇ ಅಲ್ಲದೆ ಕೇರಳ, ಪಂಜಾಬ್ ರಾಜ್ಯಗಳಿಂದ ಸೇರಿ ೨ ಸಾವಿರಕ್ಕೂ ಹೆಚ್ಚು ಓಟಗಾರರು ಆಗಮಿಸಿದ್ದಾರೆ. ಜಾಗೃತಿಯ ಜೊತೆಗೆ ಸುಸ್ಸಜ್ಜಿತ ಚಿಕಿತ್ಸೆ ನಮ್ಮ ಆಸ್ಪತ್ರೆಯ ಧ್ಯೇಯವಾಗಿದೆ ಎಂದರು.

ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಪ್ರಚಾರ್ಯರಾದ ಡಾ.ಶಾಲಿನಿ, ವೈದ್ಯಕೀಯ ಆಧೀಕ್ಷಕ ಡಾ.ನಿರಂಜನಮೂರ್ತಿ, ಹೃದ್ರೋಗ ತಜ್ಞರಾದ ಡಾ.ಶರತ್ ಕುಮಾರ್, ಡಾ.ನಿಲೇಶ್, ಡಾ.ರವಿಚಂದ್ರ, ಸಿಇಓ ಡಾ.ಸಂಜೀವಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಯೋಗಿಶ್ ಡಿ.ಎಸ್, ಜಯಶಂಕರ್, ತುಮಕೂರು ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯ ದರ್ಶಿ ಪ್ರಭಾಕರ್, ಕೆಎಸ್‌ಆರ್‌ಪಿ ಸಿಬ್ಬಂಧಿ, ಎನ್‌ಸಿಸಿ ವಿದ್ಯಾರ್ಥಿಗಳು, ಜಿಲ್ಲಾ ಪೊಲೀಸ್ ಸಿಬ್ಬಂದಿ ಹಾಜರಿದ್ದರು. 

ಮ್ಯಾರಥಾನ್ ವಿಜೇತರ ಪಟ್ಟಿ: ೧೦ಕೆ ಮ್ಯಾರಥಾನ್ ಪುರುಷ ವಿಭಾಗದಲ್ಲಿ ಶಿವಾನಂದ ಚಿಗಾರಿ ಹಾಗೂ ಮಹಿಳಾ ವಿಭಾಗದಲ್ಲಿ ಮೇಘಶ್ರೀ ಪದಕ ಪಡೆದರೆ, ೫ಕೆ ಪುರುಷ ವಿಭಾಗದಲ್ಲಿ ಗೋಪಿ ಹಾಗೂ ಮಹಿಳಾ ವಿಭಾಗದಲ್ಲಿ ಮೇಘ ಶ್ರೀ ಎಂ ಪದಕ ಪಡೆದರೆ ೫೦ ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ರಾಜಣ್ಣ ವಿ, ಮೊದಲ ಬಹುಮಾನ ಪಡೆದರು.

ಇದನ್ನೂ ಓದಿ: Tumkur News: ಸಾಮಾಜಿಕ ಜಾಲತಾಣದ ಬಗ್ಗೆ ಮಹಿಳೆಯರು ಎಚ್ಚರಿಕೆ ವಹಿಸಬೇಕು-ನೂರುನ್ನೀಸಾ