ತಿಪಟೂರು: ಗ್ರಾಮಗಳಲ್ಲಿರುವ ಕೆರೆಗಳ ನಿರ್ವಹಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ಕೆರೆಗಳು ತುಂಬಿದರೆ ಅಂತರ್ಜಲ ಅಭಿವೃದ್ಧಿ ಆಗಲಿದೆ ಎಂದು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಅಭಿಪ್ರಾಯವ್ಯಕ್ತಪಡಿಸಿದರು.
ತಾಲೂಕಿನ ಹೊನ್ನವಳ್ಳಿ ಹೋಬಳಿಯ ರಟ್ಟೆನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮ ಪಂಚಾಯತ್ ಗ್ಯಾರಘಟ್ಟ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಪುನಶ್ಚೇತನ ಗೊಳಿಸಲಾದ 746ನೇ ರಟ್ಟೆನಹಳ್ಳಿ ಕೆರೆ ಹಸ್ತಾಂತರ ಮತ್ತು ನಾಮಫಲಕ ಅನಾವರಣ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘವು ಆರ್ಥಿಕವಾಗಿ ಹಿಂದುಳಿದವರನ್ನು ಸದೃಢ ಮಾಡುವುದರ ಮೂಲಕ ಸಮಾಜಕ್ಕೆ ಹಲವಾರು ಯೋಜನೆ ನೀಡುತ್ತಿರುವುದು ಶ್ಲಾಘನೀಯ ಬೆಳವಣಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹದಿನಾಲ್ಕು ಲಕ್ಷದ ಇಪ್ಪತ್ತು ಆರು ಸಾವಿರ ರೂ ಅನುದಾನ ದಲ್ಲಿ ರಟ್ಟೆನಹಳ್ಳಿ ಗ್ರಾಮದ 18 ಎಕರೆ ಪ್ರದೇಶದ ಕೆರೆ ಅಭಿವೃದ್ಧಿಗೊಂಡು ಹಸ್ತಾಂತರವಾಗಿದೆ, ನಿರ್ವಹಣೆ ಮುಖ್ಯವಾದದ್ದು, ಸಮುದಾಯದ ಪ್ರತಿಯೊಬ್ಬರು ಭಾಗಿಯಾಗಿ ಯಾವುದೇ ಹಣ ಲೋಪವಾಗದಂತೆ ಮೌಲ್ಯಯುಕ್ತ ಉಪಯೋಗವಾಗಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ತುಮಕೂರು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ ಕಳೆದ 42 ವರ್ಷಗಳಿಂದ ರಾಜ್ಯದ್ಯಂತ ನಮ್ಮ ಗ್ರಾಮ ಅಭಿವೃದ್ಧಿ ಯೋಜನೆ ಕಾರ್ಯ ನಿರ್ವಹಿಸುತ್ತಿದೆ, 6 ಲಕ್ಷದ 52, ಸಾವಿರ ಸ್ವಸಹಾಯ ಸಂಘಗಳು ನಮ್ಮಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮೂರು ಕೋಟಿಯಷ್ಟು ಜನಸಂಖ್ಯೆಯನ್ನು ತಲುಪಿದ್ದೇವೆ, ಧರ್ಮಸ್ಥಳ ಸಂಘ ಸಾಲ ಕೊಡುವುದಿಲ್ಲ, ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಸದಸ್ಯರಿಗೆ ಸಾಲ ಕೊಡುತ್ತಿದ್ದೇವೆ, ನಮ್ಮ ಗ್ರಾಮ ಅಭಿವೃದ್ಧಿ ಯೋಜನೆ ವತಿಯಿಂದ ಶುದ್ಧ ಕುಡಿಯುವ ನೀರು ಘಟಕ, ಶಾಲೆಗಳಿಗೆ ಬೆಂಚುಗಳು, ಸುಮಾರು 69 ಸಾವಿರ ನಿರ್ಗತಿಕರಿಗೆ ಮಾಶಾಸನ, ಒಟ್ಟು 70 ಕೋಟಿ ರೂಪಾಯಿ ನೀಡಿದ್ದೇವೆ, ಮನೆ ಇಲ್ಲದವರಿಗೆ ಮನೆ ಕೊಟ್ಟಿದ್ದೇವೆ, ಆಯುಷ್ಮಾನ್ ಯೋಜನೆ ಮೂಲಕ 5 ಲಕ್ಷದವರೆಗೆ ಆರೋಗ್ಯ ಸೌಲಭ್ಯ ಸುಮಾರು ಒಂದುವರೆ ಕೋಟಿ ಜನರಿಗೆ ಸೌಲಭ್ಯ ಒದಗಿಸಿ ಕೊಟ್ಟಿದ್ದೇವೆ, ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದ್ದೇವೆ, ಬರಗಾಲ ಸಂದರ್ಭದಲ್ಲಿ ಟ್ಯಾಂಕರ್ ಗಳ ಮೂಲಕ ನೀರು ನೀಡಿದ್ದೇವೆ, ಆದರೆ ಕೆರೆಗಳು ಅಭಿವೃದ್ಧಿಯಾದರೆ ಟ್ಯಾಂಕರ್ ಗಳ ಮೂಲಕ ನೀರು ಕೊಡುವ ಅವಶ್ಯಕತೆ ಇಲ್ಲ, 792 ಕೆರೆಗಳನ್ನು ರಾಜ್ಯದ್ಯಂತ ಅಭಿವೃದ್ಧಿಪಡಿಸಿದ್ದೇವೆ.
ಜಿಲ್ಲೆಯಲ್ಲಿ 60 ಕೆರೆಗಳು, ತಾಲೂಕಿನಲ್ಲಿ 8 ಕೆರೆಗಳು ಅಭಿವೃದ್ಧಿ ಮಾಡಲಾಗಿದೆ, ಪ್ರಾಣಿ ಪಕ್ಷಿಗಳು ಸೇರಿದಂತೆ ಎಲ್ಲ ಧರ್ಮದವರಿಗೂ ಕೂಡ ಅನುಕೂಲ ಆಗುತ್ತದೆ, ಕೆರೆಗಳ ಸುತ್ತಲೂ ಸ್ವಚ್ಛತೆ ಕಾಪಾಡಿ, ಗಿಡಮರಗಳನ್ನು ಬೆಳೆಸಿ, ದುಶ್ಚಟ ಮುಕ್ತ ಕಾರ್ಯಕ್ರಮದಡಿಯಲ್ಲಿ ನಮ್ಮ ಗ್ರಾಮ ಅಭಿವೃದ್ಧಿ ಯೋಜನೆಯಿಂದ ಅನೇಕ ಕಾರ್ಯಕ್ರಮ ಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದರು.
ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಇಂದು ಈ ಕೆರೆಯಲ್ಲಿ ಬಾಗಿನ ಅರ್ಪಿಸಲಾಗಿದೆ, ಪ್ರತಿ ವರ್ಷ ಉತ್ತಮ ಮಳೆ ಬೆಳೆ ಆಗಲಿ ಎಂದರು. ಗ್ಯಾರಘಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷ ಸುಶೀಲ ಶಶಿಧರ್ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೇಕಡ ೫೦ರಷ್ಟು ಜನರಿಗೆ ಈಗಾಗಲೇ ತಲುಪಿದೆ, ಕೆರೆಗಳ ಅಭಿವೃದ್ಧಿಗೆ ನಾವೆಲ್ಲರೂ ಕೈಜೋಡಿಸಬೇಕು, ಸ್ವಚ್ಛತೆ ಕಾಪಾಡೋಣ, ಪಂಚಾಯಿತಿ ವತಿಯಿಂದ ಉದ್ಯಾನವನ ವನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಕೆರೆ ಅಭಿಯಂತರರಾದ ಭರತ್, ತಿಪಟೂರು ತಾಲ್ಲೂಕು ಯೋಜನಾಧಿಕಾರಿ ಉದಯ್ ಕೆ. ತಾಲ್ಲೂಕು ಕೃಷಿ ಮೇಲ್ವಿ ಚಾರಕರಾದ ಪ್ರಮೋದ್ ಕುಮಾರ್, ಹೊನ್ನವಳ್ಳಿ ವಲಯ ಮೇಲ್ವಿಚಾರಕ ಪರಶಿವಮೂರ್ತಿ, ರಟ್ಟೆನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯ ವಸಂತ್‌ಕುಮಾರ್, ಕೆರೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಕ್ಷಿಣ ಮೂರ್ತಿ, ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್, ಚಿಕ್ಕ ಹೊನ್ನವಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಶಿಧರ್, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯರಾದ ಮಲ್ಲಿಗಪ್ಪ ಆಚಾರ್, ಕೆರೆ ಅಭಿಯಂತರ ಭರತ್, ಶಶಿಧರ್, ಸೇರಿದಂತೆ, ರಟ್ಟಿನಹಳ್ಳಿ ಕೆರೆ ಅಭಿವೃದ್ಧಿ ಸಮಿತಿಯ ಸದಸ್ಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.