ಚಿಕ್ಕನಾಯಕನಹಳ್ಳಿ: ಹುಳಿಯಾರಿನಲ್ಲಿ ಸೆ.೨೭ ರಂದು ತಾಲ್ಲೂಕು ಭಗಿರಥ ಉಪ್ಪಾರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಶಾಸಕ ಸಿ.ಬಿ.ಸುರೇಶಬಾಬು ಗೈರಾಗಿ ಹಿಂದುಳಿದ ವರ್ಗದವರ ಬಗ್ಗೆ ಅಸಡ್ಡೆ ತೋರಿದ್ದಾರೆ ಎಂದು ಮಾಜಿ ಜಿ.ಪಂ ಸದಸ್ಯ, ಉಪ್ಪಾರ ಸಂಘದ ರಾಜ್ಯ ಉಪಾಧ್ಯಕ್ಷ ಕಲ್ಲೇಶ್ ಆಕ್ರೋಶ ವ್ಯಕ್ತಪಡಿಸಿ ದ್ದಾರೆ.
ಗೋಡೆಕೆರೆ ಸಮೀಪದ ಸೋಮನಹಳ್ಳಿಯ ಸ್ವಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಬಿಸಿ ಸಮುದಾಯದ ಪರ ಮಾತೃ ಹೃದಯ ಪ್ರದರ್ಶನ ಮಾಡುವುದನ್ನು ಬಿಟ್ಟು ಮಲತಾಯಿ ಧೋರಣೆಯನ್ನು ಪ್ರಕಟಿಸಿದ್ದಾರೆ. ಹಿಂದುಳಿದ ವರ್ಗಗಳ ಚಾಂಪಿಯನ್ ಸಿದ್ದರಾಮಯ್ಯನವರ ರಾಜಿನಾಮೆ ಕೇಳುವ ಮೂಲಕ ಸುರೇಶ ಬಾಬು ಅವರಿಗೆ ಓಬಿಸಿ ಸಮುದಾಯಕ್ಕಿಂತ ಇತರರ ಓಲೈಕೆಯೇ ಮುಖ್ಯ ಎಂಬುದು ಇದರಿಂದ ಸಾಬೀತಾಗಿದೆ ಎಂದು ಹೇಳಿದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಗೈರು ಹಾಜರಿಗೆ ಕೇಂದ್ರ ಸಚಿವ ವಿ.ಸೋಮಣ್ಣ, ಹಾಗು ಶಾಸಕ ಸಿ.ಬಿ.ಸುರೇಶ ಬಾಬು ಅವರನ್ನು ಗುರಿಯಾಗಿಸಿಕೊಂಡು ನಮ್ಮ ಶ್ರೀಗಳು ಹಾಗು ಶಾಸಕ ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳಿಗೆ ಅವರ ಕೊಡುಗೆಯನ್ನು ಪ್ರಶ್ನಿಸಿದ್ದಾರೆ. ಅಧ್ಯಕ್ಷರು ನಾಗೇಂದ್ರಪ್ಪ ಆಹ್ವಾನ ಪತ್ರಿಕೆ ನೀಡಲು ತೆರಳಿದ್ದಾಗ ಶಾಸಕರು ಬರುವ ಭರವಸೆ ನೀಡಿ ಕೇಂದ್ರ ಸಚಿವರನ್ನು ಕರೆ ತರುವ ಹೊಣೆ ಹೊತ್ತಿದ್ದರು. ಕೇಂದ್ರ ಸಚಿವ ಸೋಮಣ್ಣ ತಿಪಟೂರಿನಲ್ಲಿದ್ದರೂ ಕಾರ್ಯಕ್ರಮದತ್ತ ಸುಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪ್ಪಾರ ಸಮುದಾಯ ತಾಲ್ಲೂಕಿನಲ್ಲಿ 20 ರಿಂದ 25 ಸಾವಿರವಿದ್ದು ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿ ಮತ ತೆಗೆದುಕೊಳ್ಳಲು ಆಗುವುದಿಲ್ಲ. ಸುರೇಶಬಾಬು ಅವರಿಂದ ಹಿಂದುಳಿದ ವರ್ಗಗಳಿಗ ಭಾರಿ ಅನ್ಯಾಯವಾಗಿದೆ. ಗಂಗಾ ಕಲ್ಯಾಣ, ಶೈಕ್ಷಣಿಕ ಯೋಜನೆಗಳು, ಅಭಿವೃದ್ದಿ ಕಾಮಾಗಾರಿಯ ಕಡತಗಳು ಅಧಿಕಾರಿಗಳ ಬಳಿ ಕೊಳೆಯುತ್ತಿದೆ. ಇದರ ಬಗ್ಗೆ ಚಕಾರವೆತ್ತದ ಸುರೇಶಬಾಬು ಅಧಿಕಾರಿಗಳ ಕೈಗೊಂಬೆಯಾಗಿದ್ದಾರೆ. ಗಣಿ ಭಾದಿತ ಪ್ರದೇಶದ ಅನುದಾನದ ಪಾಲಿನಲ್ಲೂ ನಮ್ಮ ಭಾಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಮಾಜಿ ಗ್ರಾ.ಪಂ ಸದಸ್ಯ ಕುಮಾರ್, ಮುಖಂಡರಾದ ಸಂಗೇನಹಳ್ಳಿ ಶಂಕರಪ್ಪ, ರಾಮದಾಸ್, ಗೂಬೆಹಳ್ಳಿ ಚಂದ್ರು, ತ್ಯಾಗರಾಜ್ ಹಾಜರಿದ್ದರು.
ಬಿಕರಿಯಾಗುತ್ತಿರುವ ಕಾಮಾಗಾರಿಗಳು !
ಕಾಮಾಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವುದಕ್ಕೆ ಶಾಸಕರು ಸೀಮಿತರಾಗಿದ್ದಾರೆ. ಕಾಮಾಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿಲ್ಲ. ಕಾಮಾಗಾರಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸರಿಯಾದ ಸಮಯಕ್ಕೆ ಮುಗಿಸುತ್ತಿಲ್ಲ. ಇಲಾಖೆ ಇಂಜಿನಿಯರ್ ಸ್ಥಳದಲ್ಲಿ ಇದ್ದು ಕಾಮಾಗಾರಿ ವೀಕ್ಷಣೆ ಮಾಡಬೇಕು ಇದಾವುದೂ ನಡೆಯದೆ ಕಮಿಷನ್ ವ್ಯಾಪಾರಕ್ಕೆ ಕಾಮಾಗಾರಿಗಳು ಬಿಕರಿಯಾಗುತ್ತಿವೆ ಎಂದು ಕಲ್ಲೇಶ್ ದೂರಿದರು.
ಇದನ್ನೂ ಓದಿ: Tumkur News: ಭ್ರಷ್ಟಾಚಾರ ನಿರ್ಮೂಲನೆಯ ವಿದ್ಯಾರ್ಥಿಗಳಿಂದ ಆರಂಭವಾಗಬೇಕು