Monday, 23rd September 2024

Tumkur News: ಒಳಮೀಸಲಾತಿ-ಒಳ ಜಾತಿಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಲು ಒತ್ತಾಯ 

ತುಮಕೂರು: ಒಳಮೀಸಲಾತಿ ಹಂಚಿಕೆ ಮಾಡುವಾಗ ಹೆಚ್ಚು ಹಿಂದುಳಿದ ಪರಿಶಿಷ್ಟ ಜಾತಿಯ ಒಳ ಜಾತಿಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಬೇಕೆಂದು ಹೈಕೋರ್ಟ್ ವಕೀಲ ಎಚ್.ವಿ.ಮಂಜು ನಾಥ ಒತ್ತಾಯಿಸಿದರು.

ಅಖಿಲ ಕರ್ನಾಟಕ ಹಂದಿ ಜೋಗಿಸ್ ಸಂಘದವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಒಳಮೀಸಲಾತಿ ಚರ್ಚೆಯಲ್ಲಿ ಮಾತನಾಡುತ್ತಿದ್ದರು.

ಯಾವುದೇ ಜಾತಿಗೆ ಪ್ರಾತಿನಿಧ್ಯದ ಕೊರತೆ ಇದ್ದಲ್ಲಿ ಆ ಸಮುದಾಯ ಹಿಂದುಳಿದಿದೆ ಎಂದರ್ಥ. ಪರಿಶಿಷ್ಟ ಜಾತಿಯ ಒಳಗೇ ಅತಿ ಹಿಂದುಳಿದ ಜಾತಿಗಳಿಗೆ ಒಳಮೀಸಲಾತಿ ಜಾರಿಯಾದಲ್ಲಿ ಅತಿ ಹಿಂದುಳಿದ ಪರಿಶಿಷ್ಟ ಜಾತಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಒಳಮೀಸಲಾತಿ ಜಾರಿ ಸಂದರ್ಭದಲ್ಲಿ ಜಾರಿ ಮಾಡಲು ಪರಿಶಿಷ್ಟ ಜಾತಿಯ ಸಮೀಕ್ಷೆಗೆ ಸರ್ಕಾರ ಸೂಚಿಸಿದಲ್ಲಿ ಜಾತಿಯ ಜನಸಂಖ್ಯೆಯ  ಆಧಾರದ ಮೇಲೆ ಒಳ ಮೀಸಲಾತಿಯನ್ನು ವರ್ಗೀಕರಣ ಮಾಡುವುದರಿಂದ  ಹಂದಿ ಜೋಗಿ ಜನಾಂಗದವರು ತಮ್ಮ ಜಾತಿಯನ್ನು ಹಂದಿಜೋಗಿ ಎಂದು ಬರೆಸಿದಾಗ ಜಾತಿಯ ನಿಖರ ಸಂಖ್ಯೆ ಗೊತ್ತಾಗಲಿದ್ದು,  ಒಳಮೀಸಲಾತಿ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಇತ್ತೀಚೆಗೆ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವ ಹೆಚ್ಚಿದ್ದು, ಸರ್ಕಾರವು ಜಾತಿ ಪ್ರಮಾಣ ನೀಡುವವರಿಗೆ ಸರ್ಕಾರ ತರಬೇತಿ ನೀಡುವುದು ಅಗತ್ಯವಿದೆ, ಆಗ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ತಡೆಗಟ್ಟಲು ಸಾಧ್ಯ ಎಂದು ಹೇಳಿದರು.

ಸಭೆಯಲ್ಲಿ ಅಖಿಲ ಕರ್ನಾಟಕ ಹಂದಿಜೋಗಿಸ್ ಸಂಘದ ಅಧ್ಯಕ್ಷರಾ  ರಾಜೇಂದ್ರಕುಮಾರ್, ಕಾರ್ಯದರ್ಶಿ ಮಂಡ್ಯ ರಾಜು, ಜನಾಂಗದ ಮುಖಂಡರಾದ ಎಂ.ವಿ.ಗೋವಿಂದರಾಜು, ಪಿಳ್ಳಣ್ಣ, ಯಲ್ಲಪ್ಪ, ಶಿಕ್ಷಕ ಯಲ್ಲಯ್ಯ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: Tumkur University: ತುಮಕೂರು ವಿವಿಗೆ ಗೌರವ ತಂದ ಪ್ರಾಧ್ಯಾಪಕರಿಗೆ ಅಭಿನಂದನೆ