ತುಮಕೂರು: ಪ್ರತಿಯೊಬ್ಬರಲ್ಲಿಯೂ ವಿಶ್ವದ ಅನಂತ ಶಕ್ತಿ ಅಡಗಿದೆ. ಅದನ್ನು ಹೊರತರುವುದಕ್ಕೆ ಸಂಕಲ್ಪಶಕ್ತಿ, ಪರಿಶ್ರಮ, ಸಮಯಪಾಲನೆ, ಆತ್ಮವಿಶ್ವಾಸ ಅವಶ್ಯಕ ಎಂದು ಬೆಂಗಳೂರಿನ ಇಸ್ರೋ ಸಂಸ್ಥೆಯ ಉಪನಿರ್ದೇಶಕರಾದ ವಿಜ್ಞಾನಿ ಡಾ. ನಂದಿನಿ ಹರಿನಾಥ್ (Dr Nandini Harinath) ಅಭಿಪ್ರಾಯಪಟ್ಟರು. ನಗರದ (Tumkur News) ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನ ದಶಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದ ಯುವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ನಿಮ್ಮ ಇಂದಿನ ಪರಿಶ್ರಮ ಮುಂದಿನ ಯಶಸ್ಸನ್ನು ನಿರ್ಧರಿಸುತ್ತದೆ. ನಿಮಗೆ ಯಾವುದು ಅವಶ್ಯಕವಾಗಿರುವುದೋ ಅದರ ಕಡೆ ಗಮನ ಕೊಡಬೇಕೇ ಹೊರತು ವಿಚಲಿತಗೊಳಿಸುವ ವಿಚಾರಗಳನ್ನು ನಿರ್ಲಕ್ಷಿಸಬೇಕು. ನಿಮ್ಮ ಗುರಿಯ ಕಡೆ ಸದಾ ಗಮನವಿರಬೇಕು. ನಿಮ್ಮ ಆದ್ಯತೆಗಳನ್ನು ಪಟ್ಟಿ ಮಾಡಿ ಎಲ್ಲದಕ್ಕೂ ಸಮಯ ಹೊಂದಿಸಿ, ಎಲ್ಲ ಕಾರ್ಯಗಳನ್ನು ಯೋಜಿತವಾಗಿ ಮಾಡಬೇಕು ಎಂದರು.
ಆಂಧ್ರ ಪ್ರದೇಶದ ನೆಲ್ಲೂರಿನ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ಹೃದಾನಂದಜೀ ಮಹಾರಾಜ್ ಮಾತನಾಡಿ, ವಿದ್ಯಾರ್ಥಿಗಳು ಆತ್ಮಶಕ್ತಿ, ಧೀಶಕ್ತಿ, ಕ್ರಿಯಾಶಕ್ತಿಗಳನ್ನು ಜಾಗೃತಗೊಳಿಸಿಕೊಂಡು ಬೆಳೆಸಿಕೊಳ್ಳಬೇಕು. ಆಗ ಸಮಸ್ಯೆಗಳನ್ನು ಎದುರಿಸುವ ಶಕ್ತಿ ದೊರೆಯುತ್ತದೆ ಎಂದು ಹೇಳಿದರು.
ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ತಿನ ರಾಜ್ಯಾಧ್ಯಕ್ಷ ಮೈಸೂರಿನ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಮಾತನಾಡಿ, ಜ್ಞಾನ, ಭಕ್ತಿ, ಶ್ರದ್ಧೆಯ ಪಾಕ ಈ ಯುವ ಸಮ್ಮೇಳನ. ರಾಷ್ಟ್ರ ಪರಿವರ್ತನೆಯಲ್ಲಿ ಯುವಕರ ಪಾತ್ರ ಅನಿವಾರ್ಯ. ಮಕ್ಕಳು, ಯುವಕರಿಗೆ ಸ್ಫೂರ್ತಿ, ಮಾರ್ಗದರ್ಶನ ನೀಡುವುದು ಗೃಹಸ್ಥರ ಆದ್ಯ ಕರ್ತವ್ಯ ಎಂದರು.
ಗದಗ-ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಆಶೀರ್ವಚನ ನೀಡಿ ಶಿಕ್ಷಿತರಿಗೆ ಮರುಶಿಕ್ಷಣ ನೀಡಿ ಸ್ವಾತಂತ್ರ್ಯದ ಜವಾಬ್ದಾರಿ ಹೊರಲು ಸಾಮರ್ಥ್ಯಶೀಲರನ್ನಾಗಿ ಮಾಡಬೇಕಿದೆ. ಯುವಕರಲ್ಲಿ ಧೈರ್ಯ, ಸ್ಥೈರ್ಯಗಳನ್ನು ತುಂಬಿ, ಗುರಿಯನ್ನು ಸ್ಪಷ್ಟಪಡಿಸುವ ಕಾರ್ಯಕ್ರಮಗಳೇ ಯುವ ಸಮ್ಮೇಳನಗಳು. ನಮ್ಮ ಶಕ್ತಿಯನ್ನು ನಾವು ಅರಿಯುವುದರ ಜತೆಗೆ ಯಾರಿಗೂ ಎರಡನೆಯವರಾಗಿರದೆ ನಾನು ಭಾರತೀಯ ಎಂಬ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಯದ್ಭಾವಂ ತದ್ಭವತಿ ಎಂಬುದನ್ನು ಅರಿತು ಸ್ಫೂರ್ತಿಯ ಚಿಲುಮೆಯಾಗಿ, ಜಾಗೃತರಾಗಿ ಅದ್ಭುತ ಸಾಧನೆಗಳೆಡೆಗೆ ಹೆಜ್ಜೆಯಿಡಬೇಕು ಎಂದು ಕರೆ ನೀಡಿದರು.
ವಾಗ್ಮಿ ಹಾಗೂ ಅಂಕಣಕಾರ ಸೂಲಿಬೆಲೆ ಚಕ್ರವರ್ತಿ ಮಾತನಾಡಿ, ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಉನ್ನತ ಆಲೋಚನೆಗಳನ್ನು ಬೆಳೆಸಿಕೊಳ್ಳಿ, ಸಾರ್ಥಕವಾಗಿ ಜೀವಿಸಿ, ಸುಂದರ ಪುಷ್ಪಗಳಾಗಿ ಭಾರತಮಾತೆಯನ್ನು ಪೂಜಿಸಿ ಎಂದು ಕರೆ ನೀಡಿದರು.
ಶೌರ್ಯ ಪ್ರಶಸ್ತಿಗೆ (ಮರಣೋತ್ತರ) ಭಾಜನರಾದ ಅಜಿತ್ ವಿ ಭಂಡಾರ್ಕರ್ ಪತ್ನಿ, ಪ್ರಸ್ತುತ ಬೆಂಗಳೂರಿನ ಮೆಟಮೋರ್ಫ್ಸ್ ಫೌಂಡೇಶನ್‌ನ ನಿರ್ದೇಶಕರಾದ ಶಕುಂತಲಾ ಅಜಿತ್ ಭಂಡಾರ್ಕರ್ ಅವರನ್ನು ಪುರಸ್ಕರಿಸಲಾಯಿತು. ಉಪನ್ಯಾಸಕಿ ಅಕ್ಷಯಾ ಗೋಖಲೆ, ವೈದ್ಯಕೀಯ ವಿದ್ಯಾರ್ಥಿ ಚಿ. ವಿವೇಕ ಜೋಶಿ, ಸಾಫ್ಟ್ವೇರ್ ಇಂಜಿನಿಯರ್‌ಗಳಾದ ಚಿ. ನಿಖಿಲ್ ಶರ್ಮ ಮತ್ತು ಚಿ. ಸುಬ್ರಹ್ಮಣ್ಯ ನಾವಡ ಸಂವಾದ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಬೆಂಗಳೂರಿನ ಶ್ರೀ ಭವತಾರಿಣಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜಿ ವಿವೇಕಮಯೀ, ಶಾಸಕ ಜ್ಯೋತಿಗಣೇಶ್, ಹೊಸಕೋಟೆ ಶ್ರೀಮಾತಾ ಶಾರದಾಶ್ರಮದ ಸೋದರಿ ರಂಜನಿ ಹಾಗೂ ತುಮಕೂರಿನ ರಮ್ಯ ಕಲ್ಲೂರ್ ನಿರ್ವಹಿಸಿದರು. ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸ್ವಾಗತಿಸಿ, ಸ್ವಾಮಿ ಪ್ರಕಾಶಾನಂದಜೀ ನಿರೂಪಿಸಿದರು.
ಈ ಸುದ್ದಿಯನ್ನೂ ಓದಿ | Nelamangala News: ರೈಲಿಗೆ ಸಿಲುಕಿ 24 ಮೇಕೆಗಳ ದಾರುಣ ಸಾವು