ಗುಬ್ಬಿ: ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಪ್ರಾರಂಭ ಮಾಡಿರುವ ಹಿನ್ನೆಲೆಯಲ್ಲಿ ಮುಂದಿನ ಹೋರಾಟ ಕುರಿತಾಗಿ ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯಿಂದ ಸಭೆ ನಡೆಯಿತು.
ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ ತುಮಕೂರು ಜಿಲ್ಲೆಯ ರೈತರಿಗೆ ಮರಣ ಶಾಸನ ಬರೆಯುವ ಲಿಂಕ್ ಕೆನಾಲ್ ಯೋಜನೆ ಮಾಡಲು ಐವತ್ತು ಲಾರಿಗಳಲ್ಲಿ ಬೃಹತ್ ಗಾತ್ರದ ಪೈಪುಗಳನ್ನು ತಂದು ಕಾಮಗಾರಿ ಪ್ರಾರಂಭಿಸಿದ್ದು. ಯಾವುದೇ ಕಾರಣಕ್ಕೂ ನಾವು ಕಾಮಗಾರಿ ನಡೆಸಲು ಬಿಡುವುದಿಲ್ಲ. ಪ್ರತಿ ಗ್ರಾಮಗಳಲ್ಲಿ ಸಮಿತಿ ರಚನೆ ಮಾಡಿ ದೊಡ್ಡ ಮಟ್ಟದ ಹೋರಾಟದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ. ರೈತರ ಜೀವನಾಡಿ ಹೇಮಾವತಿ ನೀರಿಗಾಗಿ ಮನೆಗೊಬ್ಬರಂತೆ ಜೈಲಿಗೆ ಹೋಗಲು ಸಿದ್ಧವಿದ್ದೇವೆ ಎಂದರು.
ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಸರ್ಕಾರದ ಭಾಗವಾಗಿರುವ ತುಮಕೂರು ಜಿಲ್ಲೆಯ ರಾಜಕಾರಣಿಗಳು ಎಚ್ಚೆತ್ತು ಬೀದಿಗಿಳಿದು ಹೋರಾಡಲು ಮುಂದಾಗಬೇಕು. ಟೆಕ್ನಿಕಲ್ ಕಮಿಟಿ ಮೊದಲು ರೈತರ ಅಭಿಪ್ರಾಯವನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ನಮ್ಮ ನೀರು ನಮ್ಮ ಹಕ್ಕು ರಕ್ತ ಕೊಟ್ಟೆವು ನೀರು ಕೊಡುವುದಿಲ್ಲ ಎಂದು ತಿಳಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ ಹೇಮಾವತಿ ನೀರಿಗಾಗಿ ಪಕ್ಷಾತೀತವಾಗಿ ಹೋರಾಟ ನಡೆಯುತ್ತಿದೆ. ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾ ಮಟ್ಟದಲ್ಲಿ ಪೂರ್ಣ ಸಮಿತಿ ಸಭೆಯನ್ನು ಕರೆದಿದ್ದು. ಸಭೆಯಲ್ಲಿ ಲಿಂಕ್ ಕೆನಾಲ್ ವಿಚಾರವಾಗಿ ಚರ್ಚಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮುಖಂಡರಾದ ಎಚ್ ಟಿ ಭೈರಪ್ಪ,ಸುರೇಶ್ ಗೌಡ, ಸಿಜಿ ಲೋಕೇಶ್, ಶಂಕರ್ ಕುಮಾರ್, ಶಿವಕುಮಾರ್, ಮರಿಯಣ್ಣ, ಜಗದೀಶ್, ರೇಣುಕಾ ಪ್ರಸಾದ್, ಮಂಜುನಾಥ್, ಯತೀಶ್, ಪಾರ್ಥಸಾರಥಿ, ಡಿ ರಘು, ಶಿವಾನಂದ್ ಸೇರಿದಂತೆ ರೈತರು ಭಾಗಿಯಾಗಿದ್ದರು.
ಇದನ್ನೂ ಓದಿ: Tumkur Crime: ಕಲುಷಿತ ನೀರು ಸೇವನೆ: ಇಬ್ಬರು ಸಾವು