ಕೊರಟಗೆರೆ: ನವರಾತ್ರಿಯು ಶ್ರೀ ದೇವಿ ಪಾರ್ವತಿಯ 9 ಶಕ್ತಿಗಳನ್ನು ಪೂಜಿಸುವ ದಿನಗಳಾಗಿದ್ದು ಪಟ್ಟಣದ ಚೌಡೇಶ್ವರಿ ದೇವಿಗೆ 9 ದಿನಗಳ ಕಾಲ ವಿವಿಧ ಪೂಜೆಗಳನ್ನು ಸಲ್ಲಿಸಿ ವಿಜಯದಶಮಿಯಂದು ಮೈಸೂರಿನಲ್ಲಿ ನಡೆಯುವಂತೆ ಶಮಿ ಪೂಜೆಯನ್ನು ಸಹ ನೆರವೇರಿಸಲಾಗಿದೆ ಎಂದು ಚೌಡೇಶ್ವರಿ ದೇವಾಲಯದ ಅಧ್ಯಕ್ಷ ಕೆ.ಎಸ್.ಸೋಮಶೇಕರ್ ತಿಳಿಸಿದರು.
ಪಟ್ಟಣದ ತೇರಿನ ಬೀದಿಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಜಯದಶಮಿಯಂದು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಪಟ್ಟಣದ ಚೌಡೇಶ್ವರಿ ದೇವಾಲಯದಲ್ಲಿ ಹಲವು ವರ್ಷಗಳಿಂದ ನವರಾತ್ರಿ ಪೂಜೆಯನ್ನು ನಮ್ಮ ಪೂರ್ವಜರು ನಡೆಸಿಕೊಂಡು ಬರುತ್ತಿದ್ದಾರೆ, ನವರಾತ್ರಿಯ 9 ದಿನಗಳಲ್ಲಿ ಚೌಡೇಶ್ವರಿ ದೇವಿಗೆ ನವದುರ್ಗೆಯರ 9 ಅಲಂಕಾರ ಗಳನ್ನು ಪ್ರಸಿದ್ದ ಅರ್ಚಕರುಗಳಿಂದ ಮಾಡಿಸಿ ಧಾರ್ಮಿಕ ವಿಧಿ ವಿಧಾನದಲ್ಲಿ ಪೂಜೆಯನ್ನು ಸಲ್ಲಿಸಿಕೊಂಡು ಬರುತ್ತಿದ್ದೇವೆ, ವಿಜಯದಶಮಿ ದಿನ ದೇವಾಲಯದಲ್ಲಿ ಶಮಿ ಪೂಜೆ ಸೇರಿದಂತೆ ಇನ್ನಿತರ ಪೂಜೆಗಳನ್ನು ಸಲ್ಲಿಸಿ ವಿವಿಧ ಜಾನಪದ ವಾದ್ಯ ಕಲಾತಂಡದೊ0ದಿಗೆ ದೇವಿಯ ಉತ್ಸವವನ್ನು ಪಟ್ಟಣದಲ್ಲಿ ಪ್ರಮುಖ ಬೀದಿಗಳಲ್ಲಿ ನಡೆಸಲಾಗುವುದು ಈ ಆಚರಣೆ ಇದೇ ರೀತಿ ಮುಂದುವರೆಯಲಿದೆ ಎಂದರು.
ದೇವಾಲಯದ ಕಾರ್ಯದರ್ಶಿ ಎ.ಯೋಗೀಶ್ ಮಾತನಾಡಿ ಚೌಡೇಶ್ವರಿ ದೇವಿಗೆ ಪಟ್ಟಣದ ಮತ್ತು ತುಮಕೂರು, ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ, 9 ದಿನಗಳ ಕಾಲ ದೇವಿಗೆ ಮಹಿಳಾ ಭಕ್ತರು ನವದುರ್ಗೆಯರ ಕೀರ್ತನೆ, ಶ್ಲೋಕಗಳನ್ನು ಪಠಣ ಮಾಡುತ್ತಾರೆ, 9 ದಿನಗಳ ಕಾಲ ಪೂಜೆಯು ಶಿಸ್ತು ಬದ್ದವಾಗಿ ಯಾವುದೇ ಲೋಪದೋಷಗಳು ಇಲ್ಲದೆ ನಡೆಯುತ್ತಿದ್ದು ಈ ಪೂಜೆಗಳಿಂದ ಊರಿಗೆ ಮತ್ತು ನಾಡಿಗೆ ದೇವಿಯು ಸಾಂಕ್ರಮಿಕ ರೊಗಗಳಿಂದ ದೂರ ಮಾಡಿ ನೆಮ್ಮದಿ ಮತ್ತು ಶಾಂತಿಯನ್ನು ನೀಡುತ್ತಾಳೆ ಎನ್ನುವ ನಂಬಿಕೆ ಮತ್ತು ಪ್ರತೀತಿ ನಡೆದುಕೊಂಡು ಬಂದಿದೆ.
ನಿರ್ದೇಶಕ ಜಗದೀಶ್ ಮಾತನಾಡಿ ಚೌಡೇಶ್ವರಿ ದೇವಿಯನ್ನು ನೂರಾರು ವರ್ಷಗಳಿಂದ ನಮ್ಮ ಪೂರ್ವಜರು ಪೂಜಿಸಿಕೊಂಡು ಬರುತ್ತಿದ್ದು, ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿವೆ, ಈ ದೇವಿಯು ಅತ್ಯಂತ ಧಾರ್ಮಿಕ ಹಿನ್ನೆಲೆಯುಳ್ಳ ಶಕ್ತಿಯುತ ದೇವಿಯಾಗಿದ್ದು ನವರಾತ್ರಿಯಂದು ವಿಶೇಷ ಪೂಜೆ ಸಲ್ಲಿಸಿ ವಿಜಯದಶಮಿಯನ್ನು ಆಚರಿಸುತ್ತಿದ್ದೆವೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಿ.ನಾರಾಯಣ್, ಖಜಾಂಜಿ ಪರುಶುರಾಮ್, ಪುರುಷೋತ್ತಮ್, ಶಂಕರಪ್ಪ, ಜಯರಾಮ್, ಸುಬ್ರಮಣ್ಯ, ಕೆ.ಟಿ.ನಾರಾಯಣ್, ಬೋಗಣ್ಣ, ಲಕ್ಷ್ಮಮ್ಮ, ಧನಲಕ್ಷ್ಮೀ, ವಾಣಶ್ರೀ, ರೇಣುಶ್ರೀ, ಪಲ್ಲವಿ, ನಂದಿನಿ, ರಾಧಾ, ವೇದವತಿ, ನಾಗಮಣಿ, ಮೋನಿಕಾ, ಮಾಲತಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಇದನ್ನೂ ಓದಿ: Tumkur News: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ಬೆಂಬಲ