Tuesday, 26th November 2024

Dr G Parameshwar: ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ 11447 ಕೋಟಿ: ಸಚಿವ ಪರಮೇಶ್ವರ್

ತುಮಕೂರು : ಸರ್ಕಾರವು ತನ್ನ ಆಯವ್ಯಯದಲ್ಲಿ ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕಾಗಿ 11447 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು  ಸಚಿವ ಡಾ: ಜಿ. ಪರಮೇಶ್ವರ್ ತಿಳಿಸಿದರು.     

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ  ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾ ನಗರ ಪಾಲಿಕೆ ಸಹಯೋಗದಲ್ಲಿ ನಗರದ ಬಾಲ ಭವನ ಸಭಾಂಗಣದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಜಾತಿ ಗಣತಿ ಆಧಾರದ ಮೇಲೆ ಶೇಕಡಾ 3 ರಷ್ಟಿದ್ದ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಲಾಗಿದೆ. ಉದ್ಯೋಗ ಮತ್ತು ಶಿಕ್ಷಣಕ್ಕೆ ಮಾತ್ರ ಈ ಮೀಸಲಾತಿ ಅನ್ವಯವಾಗಲಿದೆ ಎಂದು ತಿಳಿಸಿದರು.

ಸ್ವಾವಲಂಬಿ ಬದುಕು ನಡೆಸಲು ಪರಿಶಿಷ್ಟ ವರ್ಗದ ಸುಮಾರು 5000 ಯುವಕ, ಯುವತಿಯರಿಗೆ ವಿವಿಧ ತರಬೇತಿ ನೀಡಲಾಗಿದೆಯಲ್ಲದೆ 74367 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗಿದೆ.  ರಾಜ್ಯದಲ್ಲಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ 12 ಬುಡಕಟ್ಟು ಸಮುದಾಯದ 48000 ಕುಟುಂಬಗಳಿಗೆ ಪೌಷ್ಟಿಕ ಆಹಾರ ಒದಗಿಸಲು ಸುಮಾರು 140 ಕೋಟಿ ರೂ. ಹಣವನ್ನು ವೆಚ್ಚ ಮಾಡಲಾಗಿದೆ. ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಬುದ್ಧ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.

ಪೀಠ ಆರಂಭಕ್ಕೆ ಮನವಿ

 ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ,  ಮಹರ್ಷಿ ವಾಲ್ಮೀಕಿಯವರು  ರಾಮಾಯಣ ಎಂಬ ಮಹಾ ಗ್ರಂಥವನ್ನು ರಚಿಸುವ ಮೂಲಕ ಆದಿ ಕವಿ ಮತ್ತು ಮಹಾ ಋಷಿ ಎನಿಸಿಕೊಂಡಿದ್ದಾರೆ. ಅವರ ತತ್ವಾದರ್ಶಗಳನ್ನು ಪಾಲಿಸಿಸುವ ಮೂಲಕ ದ್ವನಿ ಇಲ್ಲದವರಿಗೆ ದ್ವನಿಯಾಗಬೇಕು ಎಂದು ತಿಳಿಸಿದರು.

ನಗರ ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಸಮಾಜದಲ್ಲಿನ ದ್ವೇಷ, ಅಸೂಯೆ, ಕರುಣೆ, ಪ್ರೀತಿಯ ಪಾತ್ರಗಳನ್ನು ರಾಮಾಯಣದಲ್ಲಿ ತೋರಿಸುವ ಮೂಲಕ ಜೀವನದ ಪ್ರತಿ ಹಂತವನ್ನು  ಮಹರ್ಷಿ ವಾಲ್ಮೀಕಿಯವರು ವಿಸ್ತೃತವಾಗಿ ತಿಳಿಸಿದ್ದಾರೆ. ಇಂಥಹ ಆದರ್ಶಪ್ರಾಯ  ವ್ಯಕ್ತಿಗಳನ್ನು ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ ಅವರು ತಿಳಿಸಿದ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮತ್ತು ಜಿಲ್ಲಾ ನಾಯಕ ಮಹಿಳಾ ಸಮಾಜದ ಅಧ್ಯಕ್ಷೆ ಶಾಂತಲಾ ರಾಜಣ್ಣ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮನುಷ್ಯ ಜೀವನದ ಪರಿಕಲ್ಪನೆಯನ್ನು  ತಿಳಿಸಿದ್ದು, ಜೀವನ ರೂಪಿಸಿಕೊಳ್ಳಲು ರಾಮಾಯಣ ಒಳ್ಳೆಯ ನಿದರ್ಶನವಾಗಿದೆ. ಹಿಂದುಳಿದ ಸಮುದಾಯಗಳ  ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಅಧಿಕಾರಿಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎನ್.ಎಸ್.ಧನುಷ್, ವೈ.ಕಾವ್ಯ, ಕೆ.ಎಸ್. ಚರಣ್‌ರಾಜ್, ಸಾನ್ವಿ, ಬಿಂದು, ಡಿ.ಎ.ಪುನೀತ್, ಓ. ಭಾರ್ಗವಿ, ಸಿ.ಎಲ್. ಚೇತನ, ಭಾನುಪ್ರಕಾಶ್, ಪುಷ್ಪಲತಾ, ಎಂ.ಸೃಷ್ಟಿ, ದೀಪ್ತಿಶ್ರೀ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 

ಹಲಗಲಿ ಬೇಡರ ದಂಗೆಯಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಅವರ ಸ್ಮರಣಾರ್ಥ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ  ಪರಿಶಿಷ್ಟ ಪಂಗಡದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಮೇಲನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಹೆಚ್.ವಿ.ಸ್ಫೂರ್ತಿ ಹಾಗೂ ಮಧುಗಿರಿ ಶೈಕ್ಷಣ ಕ ಜಿಲ್ಲೆಯ ಶಿರಾ ತಾಲ್ಲೂಕು ಭುವನಹಳ್ಳಿ ಕಿತ್ತೂರು ರಾಣಿ  ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಡಿ.ಜೆ. ನವ್ಯಶ್ರೀ ಅವರಿಗೆ ೧ಲಕ್ಷ  ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

 ಅಂತರ್ ಜಾತಿ ವಿವಾಹವಾದ  ಎಂ. ಪುಷ್ಪಲತಾ ಹಾಗೂ ಸಂಜಯ್ ದಂಪತಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ. ಕೃಷ್ಣಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜು, ಪಾಲಿಕೆ ಮಾಜಿ ಮಹಾಪೌರ ಬಿ.ಜಿ. ಕೃಷ್ಣಪ್ಪ, ಚಂದ್ರಶೇಖರ ಗೌಡ, ವಾಲ್ಮೀಕಿ ವಿದ್ಯಾವರ್ಧಕ ಸಂಘ ಅಧ್ಯಕ್ಷ ಹೆಚ್. ಜಿ. ಪುರುಷೋತ್ತಮ, ಜಿಲ್ಲಾ ನಾಯಕ ಸಮುದಾಯದ ಮುಖಂಡರಾದ ವಿಜಯ ಕುಮಾರ, ಕೆಂಪಹನುಮಯ್ಯ, ಕೃಷ್ಣಮೂರ್ತಿ, ಸಿ.ದಾಸಪ್ಪ, ಮಹದೇವಯ್ಯ, ಶ್ರೀರಾಮ ಚಂದ್ರ ನಾಯಕ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಲಕ್ಷ್ಮೀನಾರಾಯಣ, ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿ, ಸಮುದಾಯದ ಮುಖಂಡರು, ವಿವಿಧ ಸಂಘಟನೆ ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.