ತುಮಕೂರು: ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಬಿಜೆಪಿ ಜಿಲ್ಲಾ ಖಜಾಂಚಿ, ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್, ನಗರದಲ್ಲಿ ಹಿತೈಷಿಗಳ ಸಭೆ ಹಾಗೂ ಬೆಂಬಲಿಗರ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಡಾ.ಎಸ್.ಪರಮೇಶ್, ವೈದ್ಯಕೀಯ ಸೇವೆಯೂ ಸಮಾಜ ಸೇವೆಯಂದೇ ನಂಬಿ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಟಿಕೆಟ್ ಆಕಾಂಕ್ಷಿಯಾಗಿದ್ದ ನನಗೆ ಟಿಕೆಟ್ ದೊರೆಯಲಿಲ್ಲ. ಪಕ್ಷದ ಹಿರಿಯ ಮುಖಂಡರು, ಮಾಜಿ ಸಚಿವ ವಿ.ಸೋಮಣ್ಣಗೆ ಟಿಕೆಟ್ ಘೋಷಿಸಿದ್ದಾರೆ. ವ್ಯಕ್ತಿಗಿಂತ ದೇಶ ಮೊದಲು, ದೇಶಕ್ಕಾಗಿ ಮತ್ತೊಮ್ಮೆ ಮೋದಿಯವರನ್ನು ಆಯ್ಕೆ ಮಾಡಲೇಬೇಕಿದೆ. ಹಾಗಾಗಿ ಇಲ್ಲಿ ನಮ್ಮ ಅಸಮಾಧಾನಗಳೆಲ್ಲವನ್ನು ಬದಿಗೊತ್ತಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಹಿತೈಷಿಗಳಲ್ಲಿ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ವಿ.ಸೋಮಣ್ಣ ದಿಢೀರನೆ ತಮ್ಮ ಬೆಂಬಲಿಗರೊಂದಿಗೆ ಸಭೆಗೆ ಆಗಮಿಸಿ ಮಾತನಾಡಿ, ಹೈಕಮಾಂಡ್ ಸೂಚನೆಯಂತೆ ಜಿಲ್ಲೆಯಲ್ಲಿ ಬಂದು ಸ್ಪರ್ಧಿಸಿದ್ದೇನೆ. ಡಾ.ಎಸ್.ಪರಮೇಶ್ ನಮ್ಮ ಸಹೋದರ ಸಮಾನ, ಅವರ ವೈದ್ಯಕೀಯ ವೃತ್ತಿ ಹಾಗೂ ಅವರ ಆರೋಗ್ಯ ಸೇವೆಯ ಬಗ್ಗೆ ನನಗೆ ಗೌರವವಿದೆ ದೇಶ ಮೊದಲು, ಮೋದಿಯವರಿಗಾಗ ನಾವೆಲ್ಲರು ಒಟ್ಟಿಗೆ ಹೋಗೋಣ ಎಂದರು.
ಸಭೆಯಲ್ಲಿ ಸಿದ್ಧಗಂಗಾ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಟಿ.ಕೆ.ನಜುಂಡಪ್ಪ , ಮುಖಂಡರಾದ ಕೋರೆ ಮಂಜಣ್ಣ, ಆಡಿಟರ್ ವಿಶ್ವನಾಥ್, ಉದ್ಯಮಿ ಚಂದ್ರಮೌಳಿ, ಗುಬ್ಬಿ ವೀರಶೈವ ಸಮಾಜದ ಅಧ್ಯಕ್ಷ ಟಿ.ಆರ್.ಶಿವಕುಮಾರ್, ವಕೀಲ ನಿರಂಜನ್, ಹಿತೈಷಿ ಬಳಗದ ಸಂಚಾಲಕ ಎಸ್.ಕಾಂತರಾಜು ಜಿಲ್ಲೆಯ ವಿವಿಧ ತಾಲೂಕಿನ ನೂರಾರು ಮುಖಂಡರು ಭಾಗವಹಿಸಿದ್ದರು.